ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಇಬ್ಬರ ಸಾವು
ಉಡುಪಿ: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಕಾಪು ತಾಲೂಕು ಮಲ್ಲಾರು ಸಲಫಿ ಮಸೀದಿ ಬಳಿ ನಡೆದಿದೆ.
ಅಂಗಡಿಯ ಮಾಲಕ ಚಂದ್ರನಗರದ ರಜಬ್ ಹಾಗೂ ರಜಾಕ್ ಮಲ್ಲಾರ್ ಮೃತ ದುರ್ದೈವಿಗಳು. ಇನ್ನೋರ್ವ ಪಾಲುದಾರ ಹಸನಬ್ಬ ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.
ಅಂಗಡಿಯಲ್ಲಿ ಗುಜರಿ ಕಟ್ಟಿಂಗ್ ಗೆ ಬಳಸಲಾಗುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಿ ಅಂಗಡಿಯಲ್ಲಿ ಇರಿಸಲಾದ ಹಳೆಯ ಪ್ರಿಜ್ ಸೇರಿದಂತೆ ಗುಜರಿ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ತಂಡ ಎರಡು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ.