Gautam Adani: ಮೋದಿ ಅಲ್ಲ, ರಾಜೀವ್ ಗಾಂಧಿ ಪ್ರಧಾನಿಯಾದಾಗಿನಿಂದ ಉದ್ಯಮಿಯಾಗಿ ಬೆಳವಣಿಗೆ ಕಾಣುತ್ತಿದ್ದೇನೆ…
ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ನಡುವಿನ ಸಂಬಂಧ ಕುರಿತು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಟೀಕಿಸುತ್ತಲೇ ಇರುತ್ತವೆ. ಮೋದಿ ಪ್ರಧಾನಿಯಾದ ಅದಾನಿ ಸಂಪತ್ತು ಹೆಚ್ಚಾಗುತ್ತಿದೆ ಎಂಬ ಟೀಕೆ ಕುರಿತು ಗೌತಮ್ ಅದಾನಿ ಈ ಆರೋಪಗಳಿಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
ನರೇಂದ್ರ ಮೋದಿ ಅವರ ಕೃಪಾಕಟಾಕ್ಷದಿಂದಾಗಿ ವ್ಯವಹಾರದಲ್ಲಿ ಲಾಭ ಮಾಡಿಕೊಂಡಿದ್ದೇನೆ ಎಂಬ ಆರೋಪವನ್ನ ಅವರು ನಿರಾಕರಿದ್ದಾರೆ. ವಾಸ್ತವವಾಗಿ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ತನ್ನ ವ್ಯಾಪಾರ ಬೆಳವಣಿಗೆ ಪ್ರಾರಂಭವಾಯಿತು ಮತ್ತು ಇದು 30 ವರ್ಷಗಳ ಪ್ರಯತ್ನ ಎಂದು ಅದಾನಿ ತಿಳಿಸಿದ್ದಾರೆ.
ನಾನು ಮತ್ತು ಪ್ರಧಾನಿ ಮೋದಿ ಒಂದೇ ರಾಜ್ಯದವರು. ಬಹುಶಃ ಅದಕ್ಕಾಗಿಯೇ ಕೆಲವು ಆರೋಪಗಳು ಸುಲಭವಾಗಿ ಬರುತ್ತಿವೆ. ಇಂತಹ ಆರೋಪಗಳು ಬರುತ್ತಿರುವುದು ನಿಜಕ್ಕೂ ದುರದೃಷ್ಟಕರ. ನನ್ನ ಯಶಸ್ಸಿನ ಹಿಂದೆ ಒಬ್ಬನೇ ಒಬ್ಬ ನಾಯಕನಿಲ್ಲ.. ಹಲವು ನಾಯಕರ ಜೊತೆಗೆ ಸರ್ಕಾರಗಳು ಪ್ರಾರಂಭಿಸಿದ ನೀತಿಗಳು ಮತ್ತು ಸಾಂಸ್ಥಿಕ ಸುಧಾರಣೆಗಳಿಂದ ನಾನು ಈ ಮಟ್ಟಕ್ಕೆ ತಲುಪಿದ್ದೇನೆ. ಇದು ಮೂರು ದಶಕಗಳ ಶ್ರಮ,’’ ಎಂದು ಅದಾನಿ ಹೇಳಿದ್ದಾರೆ.
ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರಫ್ತು- ಆಮದು ವ್ಯವಸ್ಥೆಯನ್ನ ಉದಾರೀಕರಣಗೊಳಿಸಿದಾಗ ನನ್ನ ವ್ಯಾಪಾರದ ಬೆಳವಣಿಗೆ ಪ್ರಾರಂಭವಾಯಿತು ಎಂದು ಅದಾನಿ ತಿಳಿಸಿದ್ದಾರೆ.
ಹಲವು ಸರಕಾರಗಳು ಅಳವಡಿಸಿಕೊಂಡಿರುವ ನೀತಿಗಳಿಂದಾಗಿ ನಾವು ನಮ್ಮ ವ್ಯವಹಾರಗಳನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ. ಪ್ರಸ್ತುತ ನಾವು ಮೋದಿಯವರ ಸಮರ್ಥ ನಾಯಕತ್ವದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇದೇ ರೀತಿಯ ಪುನರುಜ್ಜೀವನವನ್ನು ನೋಡುತ್ತಿದ್ದೇವೆ. ಧೀರೂಭಾಯಿ ಅಂಬಾನಿ ಭಾರತದಲ್ಲಿ ಲಕ್ಷಾಂತರ ಉದಯೋನ್ಮುಖ ಉದ್ಯಮಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಯಾವುದೇ ಬೆಂಬಲವಿಲ್ಲದ, ಸಂಪನ್ಮೂಲಗಳಿಲ್ಲದ ವ್ಯಕ್ತಿ, ಎಲ್ಲಾ ವಿಲಕ್ಷಣಗಳ ವಿರುದ್ಧ ನಿಂತು ವಿಶ್ವ ದರ್ಜೆಯ ಬಿಸಿನೆಸ್ ಗ್ರೂಪ್ ನಿರ್ಮಿಸಿದರು. ಅವರಿಂದ ನಾನು ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ ಎಂದು ಅದಾನಿ ಹೇಳಿದ್ದಾರೆ.
Gautam Adani: I have seen growth as an entrepreneur since Rajiv Gandhi became Prime Minister, not Modi…