ಹುಬ್ಬಳ್ಳಿ : ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ “ಮಿ ಕಮಿಷನರ್ ಬಿ ಕೇರ್ ಪುಲ್ ಎಂದು ಎಚ್ಚರಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು “ಡಿ.ಕೆ.ಶಿವಕುಮಾರ್ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪದ ಮೇಲೆ ಜೈಲಿನಿಂದ ಬೇಲ್ ಪಡೆದು ಡಿ.ಕೆ.ಶಿವಕುಮಾರ್ ಹೊರಗಡೆ ಬಂದಿದ್ದಾರೆ. ಅದನ್ನು ನೆನಪು ಮಾಡಿಕೊಳ್ಳಬೇಕು. ಈಗಾಗಲೇ ಗೂಂಡಾವರ್ತನೆ, ರಾಜಕೀಯ ಕುತಂತ್ರದಿಂದ ದೇಶಕ್ಕೆ ಸಾಕಷ್ಟು ನಷ್ಟವಾಗಿದೆ. ಒಬ್ಬ ದಕ್ಷ ಪೊಲೀಸ್ ಆಯುಕ್ತರ ಮೇಲೆ ಅವಾಜ್ ಹಾಕುವುದು ಎಷ್ಟರಮಟ್ಟಿಗೆ ಸರಿ ಎಂದು ಕಿಡಿಕಾರಿದ್ದಾರೆ.
ಏನು ಮಾಡಲು ಹೊರಟ್ಟೀರಿ ನೀವು, ಇದೆಲ್ಲ ದೇಶದಲ್ಲಿ ನಡೆಯೋದಿಲ್ಲ , ಬೇಲ್ ಪಡೆದು ಹೊರಗಡೆ ಇದ್ದೀರಿ ಅದನ್ನು ಅರಿತುಕೊಳ್ಳಿ ಎಂದು ಟ್ರಬಲ್ ಶೂಟರ್ ಗೆ ಟಾಂಗ್ ಕೊಟ್ಟ ಜೋಶಿ, ನಿಮ್ಮ ಮನೆಯಲ್ಲಿ ಕೋಟ್ಯಂತರ ರೂ. ಹಣ ಸಿಕ್ತು, ಭ್ರಷ್ಟಾಚಾರ ಅನ್ನೋದನ್ನು ನೆನಪಿಟ್ಟುಕೊಂಡು ಆಫೀಸರ್ಗೆ ಧಮ್ಕಿ ಹಾಕಿ ಎಂದು ವಾಗ್ದಾಳಿ ನಡೆಸಿದ್ದಾರೆ.