ರಾಜಿನಾಮೆ ನೀಡುವ ಸಮಯ ಬಂದಿದೆಯಾ ? ಗುಲಾಂ ನಬಿ ವಿರುದ್ಧ ಅಕ್ರೋಶ..
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಕಾಂಗ್ರೆಸ್ ನಾಯಕತ್ವ ತೀವ್ರವಾಗಿ ಪ್ರತಿಕ್ರಿಯಿಸಿದೆ. ಇದು ರಾಜಿನಾಮೆ ನೀಡುವ ಸಮಯವಾ ಎಂದು ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಅತ್ಯಂತ ದುರದೃಷ್ಟಕರ. ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಆಜಾದ್ ರಾಜೀನಾಮೆ ನೀಡಿರುವುದು ವಿಷಾದನೀಯ ಎಂದರು.
ಗುಲಾಂ ನಬಿ ಆಜಾದ್ ತಮ್ಮ ಸುದೀರ್ಘ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ಪಕ್ಷಕ್ಕೆ ಅಪಾರ ಹಾನಿ ಮಾಡಿದ್ದಾರೆ, ರಾಹುಲ್‌ಗೆ ಪ್ರಬುದ್ಧತೆಯ ಕೊರತೆಯಿದೆ ಮತ್ತು ಪಕ್ಷವನ್ನು ರಿಮೋಟ್ ಕಂಟ್ರೋಲ್ ಮೂಲಕ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬೊಂಬೆಯಂತಿರುವ ಹೆಸರು ಕೇಳಿ ಬರುತ್ತಿದೆ ಎಂದು ಆರೋಪಿಸಿದರು. ಪಕ್ಷದಲ್ಲಿ ಸುಧಾರಣೆಗೆ ಒತ್ತಾಯಿಸಿ 23 ನಾಯಕರ ಸಹಿಯೊಂದಿಗೆ ಪತ್ರ ಬರೆದ ನಂತರ, ಸಿಡಬ್ಲ್ಯುಸಿ ವಿಶೇಷ ಸಭೆ ಕರೆದು ಅವರನ್ನು ಕೀಳಾಗಿ ಕಾಣುತ್ತಿದೆ ಎಂದು ಆರೋಪಿಸಿದರು,
ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಅವರಿಗೆ (ಆಜಾದ್) ಎಲ್ಲವನ್ನೂ ನೀಡಿದೆ. ಮತ್ತು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಂದಾಗಿ ಅವರು ಇಂದು ಪ್ರಸಿದ್ಧ ನಾಯಕರಾಗಿದ್ದಾರೆ ಎಂದು ಹೇಳಿದರು.








