ಬೆಂಗಳೂರು : ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಹಣ ಎಲ್ಲಿಂದ ಬರಬೇಕು.? ಹೀಗಾಗಿ ನಾವು ಭಿಕ್ಷೆ ಬೇಡಿಯಾದ್ರೂ, ಇಲ್ಲವೇ ಶಾಸಕರಿಂದ ದೇಣಿಗೆಯನ್ನು ಸಂಗ್ರಹಿಸಿಯಾದ್ರೂ ಹಣ ರಾಜ್ಯ ಸರ್ಕಾರಕ್ಕೆ ಕೊಡುತ್ತೇವೆ. ಹೊರ ರಾಜ್ಯದಲ್ಲಿ, ರಾಜ್ಯದಲ್ಲಿ ಇರುವ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರನ್ನು ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರು ಊರಿಗೆ ತೆರಳಲು ಸರ್ಕಾರ ಬಸ್ ವ್ಯವಸ್ಥೆ ಮಾಡಿದೆ. ಆದರೆ, ಕೆಎಸ್.ಆರ್.ಟಿ.ಸಿ ವತಿಯಿಂದಲೇ ಬಡ ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್, ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಸಿಲುಕಿ ಊರಿಗೆ ತೆರಳಲಾಗದೇ ಇರುವವರು, ಹೊರ ರಾಜ್ಯದಲ್ಲಿ ಸಿಲುಕಿರುವ ರಾಜ್ಯದ ಕಾರ್ಮಿಕರನ್ನು ಕರೆತರಲು ಅವರಿಂದ ಹಣ ತೆಗೆದುಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.
ವಲಸೆ ಕಾರ್ಮಿಕರನ್ನು ಕರೆ ತರಲು ರಾಜ್ಯ ಸರ್ಕಾರಕ್ಕೆ ಬೇಕಾಗಿರುವ ಹಣವನ್ನು ನಾವು ಭಿಕ್ಷೆ ಬೇಡಿಯಾದ್ರೂ ನೀಡುತ್ತೇವೆ. ಇಲ್ಲವೇ ನಮ್ಮ ಶಾಸಕರಿಂದ ದೇಣಿಗೆ ಸಂಗ್ರಹಿಸಿ ನೀಡುತ್ತೇವೆ. ವಲಸೆ ಕಾರ್ಮಿಕರನ್ನು ಉಚಿತವಾಗಿ ತೆರಳಲು, ಕರೆಸಿಕೊಳ್ಳುವಂತ ವ್ಯವಸ್ಥೆಯನ್ನು ಮಾಡಬೇಕು. ಈ ಮೂಲಕ ಲಾಕ್ ಡೌನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ನೆರವಿಗೆ ರಾಜ್ಯ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.