ತಿರುಪತಿಯಲ್ಲಿರುವ ವಿಶ್ವವಿಖ್ಯಾತ ತಿರುಮಲ ತಿಮ್ಮಪ್ಪನ ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಶ್ರೀನಿವಾಸ ದೇವರ ದರ್ಶನ ಪಡೆಯಲು ಬರುತ್ತಾರೆ. ಇದರಿಂದಾಗಿ ದೀರ್ಘ ಸಮಯ ಕಾಯುವಿಕೆ ಮತ್ತು ಕಿರಿಕಿರಿ ಎದುರಿಸುವುದು ಸಹಜ ಸಂಗತಿಯಾಗಿತ್ತು.
ಈ ಸಮಸ್ಯೆ ನಿವಾರಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಯು ಇತ್ತೀಚೆಗೆ ಮಹತ್ವದ ತಂತ್ರಜ್ಞಾನ ಮತ್ತು ನಿರ್ವಹಣಾ ಕ್ರಮಗಳನ್ನು ಜಾರಿಗೆ ತರುವ ಯೋಜನೆ ಘೋಷಿಸಿದೆ. AI ಮತ್ತು ಅತಿ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಕ್ತರು ಕೇವಲ 2-3 ಗಂಟೆಗಳಲ್ಲಿ ತಿಮ್ಮಪ್ಪನ ದರ್ಶನ ಪಡೆಯುವಂತೆ ಮಾಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ದೇವಾಲಯದ ಆವರಣದೊಳಗಿನ ದರ್ಶನದ ಪಥವನ್ನು ಸುಗಮಗೊಳಿಸಲು AI ಆಧಾರಿತ ಕ್ಯೂ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನವು ಭಕ್ತರ ಸಂಖ್ಯೆಯನ್ನು ಮತ್ತು ಹರಿವನ್ನು ನಿಖರವಾಗಿ ಟ್ರ್ಯಾಕ್ ಮಾಡುವ ಮೂಲಕ ದರ್ಶನಕ್ಕೆ ಬೇಕಾದ ಸಮಯವನ್ನು ಕಡಿಮೆ ಮಾಡುತ್ತದೆ.
ಜೊತೆಗೆ ಆನ್ಲೈನ್ನಲ್ಲಿ ದರ್ಶನಕ್ಕಾಗಿ ಮೊದಲೇ ಸಮಯ ಕಾಯ್ದಿರಿಸುವ ವ್ಯವಸ್ಥೆಯನ್ನು ಹೆಚ್ಚು ತ್ವರಿತಗತಿಯಲ್ಲಿ ಮಾಡಲಾಗುತ್ತದೆ.
ಅಷ್ಟೇ ಅಲ್ಲ ಆಡಳಿತ ಮಂಡಳಿಯು ದೀರ್ಘಕಾಲದಿಂದಲೂ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅನ್ಯಧರ್ಮೀಯ ನೌಕರರನ್ನು VRS ಅಥವಾ ಇತರ ಸರ್ಕಾರಿ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿದೆ.
ಈ ಹೊಸ ಕ್ರಮಗಳು ಮತ್ತು ತಂತ್ರಜ್ಞಾನ ಬಳಕೆಗೆ ಭಕ್ತರಿಂದ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಟಿಟಿಡಿ ಹೇಳಿದೆ.
ದರ್ಶನದ ಸಮಯದ ಅನುಕೂಲಕ್ಕಾಗಿ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಲು, ಭಕ್ತರು ಆನ್ಲೈನ್ ಸ್ಲಾಟ್ ಬುಕ್ಕಿಂಗ್, ಫೇಷಿಯಲ್ ರೆಕಗ್ನಿಷನ್ ಮತ್ತು ಕ್ಯೂ ಮ್ಯಾನೇಜ್ಮೆಂಟ್ ನಿಯಮಗಳನ್ನು ಪಾಲಿಸಲು ಮನವಿ ಮಾಡಲಾಗಿದೆ.
ಈ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸಿದ್ರೆ, ನಿಖರ ಸಮಯದಲ್ಲಿ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ, ದರ್ಶನದ ನಂತರ ಭಕ್ತರಿಗೆ ತೀರ್ಥ ಪ್ರಸಾದ, ಲಡ್ಡು, ಮತ್ತು ಇತರ ಪ್ರಸಾದಗಳನ್ನು ಪಡೆಯುವ ವ್ಯವಸ್ಥೆಯಲ್ಲಿಯೂ ಯಾವುದೇ ತೊಂದರೆಯಿಲ್ಲದೆ ಸೇವೆ ಲಭ್ಯವಾಗುತ್ತದೆ.
ಈ ಕ್ರಮಗಳು ಯಶಸ್ವಿಯಾದಲ್ಲಿ, ಭಾರತದ ಇತರ ಪ್ರಮುಖ ತೀರ್ಥಕ್ಷೇತ್ರಗಳು, ತಿರುಪತಿಯ ಮಾದರಿಯ ಆಧುನಿಕ ವ್ಯವಸ್ಥೆಗಳನ್ನು ತಮ್ಮ ದೇವಾಲಯಗಳಲ್ಲಿಯೂ ಅನುಸರಿಸುವ ಸಾಧ್ಯತೆ ಇದೆ.