ಹಾಸನ : ಲೂಟಿಕೋರ ಸರ್ಕಾರದಿಂದ ಜಿಲ್ಲೆಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತಗೊಂಡಿವೆ. ಬಿಜೆಪಿ ಸರ್ಕಾರಕ್ಕೆ ರೈತರು, ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರ ಎಲ್ಲ ಯೋಜನೆಗಳಲ್ಲೂ ಕಮೀಷನ್ ಪಡೆಯುವ ದಂಧೆ ನಡೆಸುತ್ತಿದೆ. ಗುತ್ತಿಗೆದಾರರು ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿಕೊಳ್ಳಲು ( ಎಲ್‌ಒಸಿ) ಮುಂಗಡವಾಗಿ ಆರೂವರೆ ಪರ್ಸೆಂಟ್ ಕಮೀಷನ್ ಕೊಡುತ್ತಿದ್ದಾರೆ. ಕಮೀಷನ್ ಕೊಡದ ಗುತ್ತಿಗೆದಾರರ ಬಿಲ್ ಗಳು ವರ್ಷಗಳಾದರೂ ಪಾವತಿಯಾಗುವುದಿಲ್ಲ ಎಂದು ದೂರಿದರು.
ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ ಯಾವೊಂದು ಕೆಲಸವೂ ನಡೆದಿಲ್ಲ. ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇಂಥ ದ್ವೇಷದ ರಾಜಕಾರಣಕ್ಕೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ. ನೀರಾವರಿ ಇಲಾಖೆಯಲ್ಲಿ ಹಣ ಕೊಟ್ಟ ಕಡತಗಳಿಗೆ ಸಹಿ ಹಾಕುವ ಪದ್ಧತಿ ಈ ಸರ್ಕಾರದಲ್ಲಿದೆ. ಹಣ ಕೊಡದ ಕಡತಗಳು ಮೂಲೆ ಸೇರುತ್ತಿವೆ. ವಿಧಾನಸಭಾ ಅಧಿವೇಶನ ಕರೆಯಲಿ ಅಂಕಿ ಅಂಶಗಳ ಸಹಿತ ಸರ್ಕಾರದ ಲೋಪ, ಹಾಸನ ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿ ರುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದು ಕೊಳ್ಳುವೆ ಎಂದು ರೇವಣ್ಣ ಹೇಳಿದ್ದಾರೆ.








