Broken Rice Export: ನುಚ್ಚು ಅಕ್ಕಿ ರಫ್ತಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ….
ಏರುತ್ತಿರುವ ಅಕ್ಕಿ ಬೆಲೆಗಳನ್ನು ನಿಯಂತ್ರಿಸಲು, ಭಾರತ ಸರ್ಕಾರ ಒಡೆದ ಅಕ್ಕಿ ಅಥವಾ ನುಚ್ಚು ಅಕ್ಕಿಯ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಬಗ್ಗೆ ಆದೇಶವನ್ನೂ ಹೊರಡಿಸಲಾಗಿದ್ದು, ಇಂದಿನಿಂದಲೇ ಈ ಆದೇಶ ಜಾರಿಗೆ ಬರಲಿದೆ. ಈ ಹಿಂದೆ ನುಚ್ಚು ಅಕ್ಕಿ ರಫ್ತಿಗೆ ಸುಂಕ ಇರಲಿಲ್ಲ.
ಇದಲ್ಲದೇ ಸರ್ಕಾರ ಹೊರಡಿಸಿರುವ ಮತ್ತೊಂದು ಆದೇಶದ ಅನ್ವಯ ಬಾಸ್ಮತಿಯೇತರ ಅಕ್ಕಿಯ ರಫ್ತಿಗೆ ಶೇ.20ರಷ್ಟು ಸುಂಕ ವಿಧಿಸಲಾಗುತ್ತದೆ. ಈ ಆದೇಶವೂ ಇಂದಿನಿಂದಲೇ ಜಾರಿಗೆ ಬರಲಿದೆ. ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುವುದನ್ನ ಈ ನಿರ್ಬಂಧದಿಂದ ಹೊರಗಿಡಲಾಗಿದೆ. ಚೀನಾದ ನಂತರ ಭಾರತವು ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಿಸುವ ದೇಶವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಜಾಗತಿಕ ಅಕ್ಕಿ ಉತ್ಪಾದನೆಯಲ್ಲಿ ಭಾರತವು 20% ಪಾಲು ಹೊಂದಿದೆ.
ಜಾಗತಿಕ ವ್ಯಾಪಾರದಲ್ಲಿ ಭಾರತದ ಶೇ.40 ಪಾಲು
ಪ್ರಸಕ್ತ ಖಾರಿಫ್ ಹಂಗಾಮಿನಲ್ಲಿ ಭತ್ತದ ಬೆಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ಕಂದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಕೃಷಿ ಸಚಿವಾಲಯದ ಪ್ರಕಾರ, ಕೆಲವು ರಾಜ್ಯಗಳಲ್ಲಿ ಮಳೆ ಕೊರತೆಯಿಂದಾಗಿ, ಪ್ರಸಕ್ತ ಖಾರಿಫ್ ಹಂಗಾಮಿನಲ್ಲಿ ಇಲ್ಲಿಯವರೆಗೆ ಭತ್ತದ ಪ್ರದೇಶವು 383.99 ಲಕ್ಷ ಹೆಕ್ಟೇರ್ಗೆ 5.62 ರಷ್ಟು ಕಡಿಮೆಯಾಗಿದೆ. ಜಾಗತಿಕ ಅಕ್ಕಿ ವ್ಯಾಪಾರದಲ್ಲಿ 40% ಪಾಲನ್ನ ಭಾರತ ಹೊಂದಿದೆ. ಭಾರತ 2021-22 ರಲ್ಲಿ 21.12 ಮಿಲಿಯನ್ ಟನ್ ಅಕ್ಕಿಯನ್ನು ರಫ್ತು ಮಾಡಿದೆ. ಈ ಅವಧಿಯಲ್ಲಿ, $ 6.11 ಬಿಲಿಯನ್ ಮೌಲ್ಯದ ಬಾಸ್ಮತಿ ಅಲ್ಲದ ಅಕ್ಕಿಯನ್ನು 150 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗಿದೆ.