ವಿಧಾನ ಪರಿಷತ್ ಚುನಾವಣೆ – ಜೂನ್ 13 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ…
ಜೂನ್ 13 ರಂದು ವಿಧಾನ ಪರಿಷತ್ ಗಾಗಿ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಅಂದು ರಾಜ್ಯ ಸರ್ಕಾರದಿಂದ ಆಯಾ ಶಾಲಾ ಕಾಲೇಜುಗಳಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿರುವ ಪ್ರಕಾರ ಜೂನ್ 13 ರಂದು ವಿಧಾನಪರಿಷತ್ತಿನ ವಾಯುವ್ಯ ಪದವೀಧರ ಕ್ಷೇತ್ರ, ವಾಯುವ್ಯ ಶಿಕ್ಷಕರ ಹಾಗೂ ದಕ್ಷಿಣ ಪದವೀಧರ ಕ್ಷೇತ್ರ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮತದಾನ ನಡೆಯಲಿರುವಂತ ವಾಯುವ್ಯ ಪದವೀಧರ ಕ್ಷೇತ್ರದ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ, ದಕ್ಷಿಣ ಪದವೀಧರ ಕ್ಷೇತ್ರದ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳು, ವಾಯುವ್ಯ ಶಿಕ್ಷಕರ ಕ್ಷೇತ್ರದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ.
ಈ ಚುನಾವಣೆ ಕ್ಷೇತ್ರವ್ಯಾಪ್ತಿಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು, ಅನುದಾನಿತ, ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್ ಗಳು ಸೇರಿದಂತೆ ಖಾಸಗಿ ಕಾರ್ಖಾನೆಗಳು, ಸಹಕಾರಿ ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲಾವುಗಳಿಗೆ ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ, ಜೂನ್ 13 ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಲಾಗಿದೆ.