ಸಾಕು ನಾಯಿ ಹುಟ್ಟು ಹಬ್ಬಕ್ಕೆ 5 ಸಾವಿರ ಮಂದಿಗೆ ಬಾಡೂಟ…
ನೆಚ್ಚಿನ ಸಾಕು ನಾಯಿ ಬರ್ತಡೆಗೆ ಒಂದು ಕ್ವಿಂಟಲ್ ಕೇಕ್ ಕಟ್ ಮಾಡಿ 5,000 ಮಂದಿಗೆ ಭರ್ಜರಿ ಬಾಡೂಟ ಹಾಕಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಎಷ್ಟೋ ಮನೆಗಳಲ್ಲಿ ನಾಯಿಯನ್ನ ಕೇವಲ ಪ್ರಾಣಿಯಾಗಿ ನೋಡದೆ ಮನೆಯ ಸದಸ್ಯರಂತೆ ನೋಡುತ್ತಾರೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಶಿವಪ್ಪ ಯಲ್ಲಪ್ಪ ಮರ್ದಿ ಎಂಬುವವರು ನೆಚ್ಚಿನ ನಾಯಿಯ ಕ್ರಿಶ್ ಬರ್ತ್ ಡೇಗೆ ಒಂದು ಕ್ವಿಂಟಲ್ ಕೇಕ್ ಕಟ್, 5 ಸಾವಿರ ಮಂದಿಗೆ ಭರ್ಜರಿ ಬಾಡೂಟ ಹಾಕಿಸಿ ಸುದ್ದಿಯಾಗಿದ್ದಾರೆ.
ಸಾಕು ನಾಯಿ ಕ್ರಿಶ್ ಬರ್ತಡೆಗಾಗಿ ಗ್ರಾಮದ 5 ಸಾವಿರ ಜನರಿಗೆ 3 ಕ್ವಿಂಟಲ್ ಚಿಕನ್, 1 ಕ್ವಿಂಟಾಲ್ ಮೊಟ್ಟೆ ಊಟ ಹಾಕಿಸಿದ್ದಾರೆ. ಜತೆಗೆ ಸಸ್ಯಾಹಾರಿಗಳಿಗೆ 50 ಕೆಜಿ ಕಾಜೂಕರಿ ಊಟ ಹಾಕಿಸಿದ್ದಾರೆ. ಸಾಕು ನಾಯಿಯ ಅದ್ದೂರಿ ಹುಟ್ಟು ಹಬ್ಬದ ಆಚರಣೆಯ ನಂತರ ನಾಯಿಯನ್ನ ವಾದ್ಯಗಳ ಮೂಲಕ ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಊರಿನ ಜನರೆಲ್ಲ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.
ಅದ್ದೂರಿ ಬರ್ತಡೆಗೆ ಕಾರಣ –
ನಾಯಿ ಮಾಲೀಕ ಶಿವಪ್ಪ ಮರ್ದಿ ಕಳೆದ 20ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಈ ವೇಳೆ ನೂತನ ಸದಸ್ಯರೊಬ್ಬರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಹಳೆ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಹಿಂದಿನ ಸದಸ್ಯರು ನಾಯಿಯಂತೆ ತಿಂದು ಹೋಗಿದ್ದಾರೆಂದು ಅವಮಾನ ಮಾಡಿದ್ದಾರಂತೆ. ಹೀಗಾಗಿ ಅವರಿಗೆ ಪ್ರತ್ಯುತ್ತರ ಕೊಡಲು ನಾಯಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಲ್ಲದೇ ಐದು ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ.