ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ Varun Singh saaksha tv
ಬೆಂಗಳೂರು : ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ. ಹೆಲಿಕ್ಯಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಉಸಿರು ನಿಲ್ಲಿಸಿದ್ದಾರೆ.
ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ದಂಡನಾಯಕರಾದ ಬಿಪಿನ್ ರಾವತ್ ಸೇರಿ 13 ಮಂದಿ ಮೃತಪಟ್ಟಿದ್ದರು. ಆದರೆ ಈ ಅಪಘಾತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತೀವ್ರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.
ಕೂಡಲೇ ಅವರನ್ನು ವೆಲ್ಲಿಂಗ್ಟನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.
ಇನ್ನು ಸೇನಾಧಿಕಾರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ದೇಶಕ್ಕಾಗಿ ಹೆಮ್ಮೆ, ಶೌರ್ಯ ಮತ್ತು ವೃತ್ತಿಪರತೆಯಿಂದ ಸೇವೆ ಸಲ್ಲಿಸಿದರು. ಅವರ ನಿಧನದಿಂದ ಮನಸ್ಸಿಗೆ ಅತೀವ ನೋವುಂಟಾಗಿದೆ. ದೇಶಕ್ಕೆ ಅವರು ನೀಡಿದ ಉತ್ಕೃಷ್ಟ ಸೇವೆಯನ್ನು ಎಂದಿಗೂ ಮರೆಯಲಾಗದು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಓಂ ಶಾಂತಿ.. ಎಂದು ಬರೆದುಕೊಂಡಿದ್ದಾರೆ.