GT vs SRH Match Preview | ಸೇಡಿನ ಸಮರದಲ್ಲಿ ಗೆಲ್ಲೋದು ಯಾರು..?
ಇಂಡಿಯನ್ ಪ್ರಿಮಿಯರ್ ಲೀಗ್ ನ 40ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಸೀಸನ್ ನಲ್ಲಿ ಉಭಯ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.
ಗುಜರಾತ್ ಟೈಟಾನ್ಸ್ ತಂಡದ ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಮೂರನೇ ಸ್ಥಾನದಲ್ಲಿದೆ. ಹಾರ್ದಿಕ್ ಪಾಂಡ್ಯ ಸೇನೆ ಏಳು ಪಂದ್ಯಗಳನ್ನಾಡಿದ್ದು, ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇತ್ತ ವಿಲಿಯಮ್ ಸನ್ ಪಡೆ ಕೂಡ ಏಳು ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಗುಜರಾತ್ ಟೈಟಾನ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಿದ್ದು, ಈ ಪಂದ್ಯದಲ್ಲಿ ಎಂಟು ರನ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 67 ರನ್ ಗಳಿಸಿದ್ದರು.
ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 9 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 47 ರನ್ ಗಳಿಸಿದರು.
ಕಳೆದ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಸನ್ ರೈಸರ್ಸ್ ತಂಡ 8 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ ಉಭಯ ತಂಡಗಳು ಬಲಿಷ್ಠವಾಗಿವೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಎರಡೂ ತಂಡಗಳು ಸ್ಥಿರ ಪ್ರದರ್ಶನ ನೀಡುತ್ತಿವೆ.
ಗುಜರಾತ್ ಟೈಟಾನ್ಸ್ ತಂಡದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ತಂಡದ ಬೆನ್ನೆಲುಬಾಗಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಹಾರ್ದಿಕ್ ಶೈನ್ ಆಗುತ್ತಲೇ ಇದ್ದಾರೆ. ಆರಂಭಿಕರಾದ ಶುಬ್ಮನ್ ಗಿಲ್ ಮತ್ತು ವೃದ್ದಿಮಾನ್ ಸಾಹಾ ಸ್ಥಿರ ಪ್ರದರ್ಶನ ನೀಡಬೇಕಿದೆ. ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸುತ್ತಿದ್ದಾರೆ. ಹಾಗೇ ರಾಹುಲ್ ಟೆವಾಟಿಯಾ ಕೊನೆಯಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಲ್ ರೌಂಡರ್ ಆಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ರಶೀದ್ ಖಾನ್, ವೇಗಿಗಳ ವಿಭಾಗದಲ್ಲಿ ಮಹಮ್ಮದ್ ಶಮಿ, ಯಶ್ ದಯಾಲ್, ಲೂಕಿ ಫರ್ಗುಸನ್ ಅವರು ಎದುರಾಳಿಗೆ ಕಬ್ಬಿಣದ ಕಡಲೆಯಾಗಿದ್ದಾರೆ.
ಇತ್ತ ಸನ್ ರೈಸರ್ಸ ಹೈದರಾಬಾದ್ ತಂಡ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್ ನಲ್ಲಿ ಕೇನ್ ವಿಲಿಯಮ್ ಸನ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಟಿ ಪ್ರಮುಖ ಆಟಗಾರರಾಗುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಡೆಮ್ ಮಾರ್ಕ್ರಂ, ನಿಕೋಲಸ್ ಪೂರನ್ ತಂಡಕ್ಕೆ ನೆರವಾಗುತ್ತಿದ್ದರೇ ವಾಷಿಂಗ್ ಟನ್ ಸುಂದರ್ ಆಲ್ ರೌಂಡರ್ ಆಟ ಚೆನ್ನಾಗಿದೆ.
ಇನ್ನು ಸನ್ ರೈಸರ್ಸ್ ಗೆಲುವು ನಿಂತಿರೋದೇ ಬೌಲಿಂಗ್ ವಿಭಾಗದಲ್ಲಿ, ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ವಿಕೆಟ್ ಉಡಾಯಿಸಿದ್ರೆ, ಟಿ ನಟರಾಜನ್ ಪವರ್ ಪ್ಲೇ ಜೊತೆಗೆ ಡೆತ್ ಓವರ್ ಗಳಲ್ಲಿ ವಿಕೆಟ್ ಗಳ ಬೇಟೆಯಾಡುತ್ತಿದ್ದಾರೆ. ಇವರಿಗೆ ಉಮ್ರಾನ್ ಮಲ್ಲಿಕ್ ಸಾಥ್ ನೀಡುತ್ತಾ ಮಿಡಲ್ ಓವರ್ ಗಳಲ್ಲಿ ತಮ್ಮ ವೇಗದ ಮೂಲಕ ವಿಕೆಟ್ ಪಡೆಯುತ್ತಿದ್ದಾರೆ.
gt-vs-srh-match-preview- ipl 2022