ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ತಪ್ಪು ಸಾಬೀತಾದರೆ ಯಾವುದೇ ನಿರ್ದಾಕ್ಷಿಣ್ಯ ಇಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಎಚ್ಚರಿಸಿದ್ದಾರೆ.
ಬೆಂಗಳೂರಿನ (Bengaluru) ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಾಲ್ಮೀಕಿ ನಿಗಮದಲ್ಲಿ ಎಸ್ಸಿ-ಎಸ್ಟಿ ವರ್ಗಗಳ ಹಣ ಲೂಟಿ ಮಾಡಲಾಗಿದೆ. ಅವರ ಸಂಪುಟ ಸಚಿವರೇ ರಾಜೀನಾಮೆ ನೀಡಿದ್ದಾರೆ. ಅಕ್ರಮ ಆಗಿದ್ದು 187 ಕೋಟಿ ಅಲ್ಲ, 89 ಕೋಟಿ ಎಂದು ಸಿಎಂ ಅವರೇ ಹೇಳಿದ್ದಾರೆ. ಇಷ್ಟು ಹಣ ವರ್ಗಾವಣೆ ಆದರೂ ನನ್ನ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರು ತಮ್ಮನ್ನೇ ತಾವು ಚಾಣಾಕ್ಷರು ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಎಸ್ಸಿ-ಎಸ್ಟಿ ವರ್ಗಗಳಿಗೆ ಅನ್ಯಾಯ ಆಗಿದೆ. ಈ ಹಣದ ದರೋಡೆಗೆ ಹೊಣೆ ಯಾರು? ರಾಷ್ಟ್ರೀಯ ಬ್ಯಾಂಕ್ಗಳ ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ಆಗಲಿ. ಈಗಾಗಲೇ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ಮೇಲೆ ತನಿಖೆ ನಡೆಯುತ್ತಿದೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.ಕೇಂದ್ರದ ಇ.ಡಿ ಇಲ್ಲಿಗೆ ಬಂದು ಕಪ್ಪು ಹಣ ಪತ್ತೆ ಮಾಡಿ ತನಿಖೆ ಮಾಡುತ್ತಿದೆ. ಕಾಂಗ್ರೆಸ್ ಅವರಿಗೆ ಇದು ಇಷ್ಟ ಆಗಲ್ಲ ಅಂತ ಇ.ಡಿಯವರು ಬರದೇ ಇರೋಕ್ಕಾಗುತ್ತಾ? ಅವರಿಗೆ ಕೇಂದ್ರ ಸ್ವಾತಂತ್ರ್ಯ ಕೊಟ್ಟಿದೆ ಎಂದು ಹೇಳಿದ್ದಾರೆ.