ಅಹಮದಾಬಾದ್: ಬೌಲರ್ ಗಳ ಚಮತ್ಕಾರದಿಂದಾಗಿ ಡೆಲ್ಲಿ ತಂಡವು ಗುಜರಾತ್ ನ್ನು ಸುಲಭವಾಗಿ ಸೋಲಿಸಿದೆ. ಈ ಮೂಲಕ ಜಯದ ಲಯಕ್ಕೆ ಕೂಡ ಮರಳಿದೆ.
ಡೆಲ್ಲಿ ತಂಡವು ಈ ಜಯದ ಮೂಲಕ 9ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಅಲ್ಲದೇ, ರನ್ ರೇಟ್ ನಲ್ಲಿ ಕೂಡ ಉತ್ತಮವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಬ್ಯಾಟ್ಸಮನ್ ಗಳ ವೈಫಲ್ಯಿಂದಾಗಿ 17.3 ಓವರ್ ಗಳಲ್ಲಿ ಕೇವಲ 89 ರನ್ ಗಳಿಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ 8.5 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿ ಗೆಲುವು ಸಾಧಿಸಿತು.
90 ರನ್ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟರ್ಗಳು ಆರಂಭದಲ್ಲಿಯೇ ಸ್ಫೋಟಿಸಲು ಹೋಗಿ ವಿಕೆಟ್ ಕಳೆದುಕೊಂಡರು. ಆರಂಭಿಕ ಜೇಕ್ ಫ್ರೇಸರ್-ಮ್ಯಾಕ್ಗುರ್ಕ್ ಮೊದಲ 10 ಎಸೆತಗಳಲ್ಲಿಯೇ 20 ರನ್ ಗಳಿಸಿದರು. ಪೃಥ್ವಿ ಶಾ ಸಹ 7 ರನ್ ಗಳಿಗೆ ಔಟಾದರು. ಅಭಿಷೇಕ್ ಪೋರೆಲ್, ಶಾಯ್ ಹೋಪ್, ರಿಷಭ್ ಪಂತ್ ಸ್ಫೋಟಕ ಆಟವಾಡಿ ಗೆಲುವು ತಂದು ಕೊಟ್ಟರು.
ಗುಜರಾತ್ ಟೈಟಾನ್ಸ್ ಆರಂಭದಿಂದಲೂ ಆಘಾತ ಕಾಣುತ್ತ ಸಾಗಿತು. ಯಾವೊಬ್ಬ ಆಟಗಾರನು ಪಿಚ್ ಗೆ ಅಂಟಿಕೊಂಡು ಆಡಲಿಲ್ಲ. ಮೊದಲ 5 ಓವರ್ಗಳಲ್ಲೇ 30 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರ ಕ್ರೀಸ್ಗೆ ಬಂದವರೂ ಪ್ರತಿರೋಧ ತೋರಲಿಲ್ಲ. ಹೀಗಾಗಿ ತಂಡವು ಹೀನಾಯ ರನ್ ದಾಖಲಿಸಿತು. ಡೆಲ್ಲಿ ಪರ ಮುಕೇಶ್ ಕುಮಾರ್ 3, ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಲಾ ಎರಡು ವಿಕೆಟ್, ಖಲೀಲ್ ಅಹ್ಮದ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.