ಇಂದ್ರಜಿತ್ ಜೊತೆಗಿನ ಫೋಟೋ ವೈರಲ್ : ಹೆಚ್ ಡಿಕೆ ಹೇಳಿದ್ದೇನು..?
ಬೆಂಗಳೂರು : ನಟ ದರ್ಶನ್ ಮೇಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದು, ಭಾರಿ ಕಾವು ಪಡೆದುಕೊಂಡಿದೆ. ಇದರ ಬೆನ್ನಲ್ಲೆ ಇಂದ್ರಜಿತ್ ಲಂಕೇಶ್ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕುವ ಕೆಲಸ ಮಾಡಬೇಡಿ. ಅನೇಕ ಬಾರಿ ಇಂದ್ರಜಿತ್ ಲಂಕೇಶ್ ನನ್ನನ್ನು ಭೇಟಿಯಾಗಿ ಇಂಟರ್ ವ್ಯೂ ತೆಗೆದುಕೊಂಡಿದ್ದಾರೆ. ಆದರೆ ಇತ್ತೀಚೆಗೆ ನಾನು ಅವರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಾನು ಇಂದ್ರಜಿತ್ ಲಂಕೇಶ್ ಭೇಟಿಯಾಗಿಲ್ಲ. ಯಾಕೆ ಈ ಪ್ರಕರಣದಲ್ಲಿ ನನ್ನ ಹೆಸರು ತರಲು ಪ್ರಯತ್ನ ಮಾಡ್ತಿದ್ದಾರೋ ಗೊತ್ತಿಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸ ಇವೆ. ನಾನು ರಾಜಕೀಯ ಮಾಡಿದ್ರೆ ನೇರವಾಗಿ ಮಾಡ್ತೀನಿ. ಕದ್ದು ಮುಚ್ಚಿ ರಾಜಕಾರಣ ನಾನು ಮಾಡಲ್ಲ. ನನ್ನಂತೆ ವಿಷಯವನ್ನ ಮುಕ್ತವಾಗಿ ಪ್ರಸ್ತಾಪ ಮಾಡೋರು ಈ ದೇಶದಲ್ಲಿ ಇಲ್ಲ. ಮುಕ್ತಾವಾಗಿ ಎಲ್ಲರ ಜೊತೆ ಚರ್ಚೆ ಮಾಡ್ತೀನಿ. ಈ ಫೋಟೋ ಬಿಡುಗಡೆ ಮಾಡಿರೋ ಹಿಂದಿನ ಉದ್ದೇಶ ಏನು ಅಂತ ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕುವ ಕೆಲಸ ಮಾಡಬೇಡಿ ಎಂದು ಗರಂ ಆದರು.
ಇನ್ನು ನನ್ನನ್ನು ಪ್ರತಿ ನಿತ್ಯ ನೂರಾರು ಜನ ಭೇಟಿ ಆಗ್ತಾರೆ. ಯುವಕರು, ವಯಸ್ಸಾಗಿರೋರು ಫೋಟೋ ತೆಗೆದುಕೊಳ್ತಾರೆ. ಇತ್ತೀಚೆಗೆ ನಾನು ಇಂದ್ರಜಿತ್ ಭೇಟಿಯಾಗಿಲ್ಲ. ಈ ಫೋಟೋ ಈಗ ಯಾರು ಉಪಯೋಗ ಮಾಡಿಕೊಳ್ಳಲು ಹೋಗ್ತಿದ್ದಾರೆ ಅನ್ನೋ ಸತ್ಯ ಇಂದ್ರಜಿತ್ ಲಂಕೇಶ್ ತಿಳಿಸಲಿ ಎಂದರು.