ಪಕ್ಷ ರಾಜಕಾರಣಕ್ಕೆ ಮೀರಿದ ವ್ಯಕ್ತಿತ್ವ ಅವರದ್ದು : ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಹೆಚ್ ಡಿಕೆ ಕಂಬನಿ
ಬೆಂಗಳೂರು : ಕಾಂಗ್ರೆಸ್ ನ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ನಮ್ಮ ನಾಡಿನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ನನ್ನ ಆಪ್ತರೂ ಆಗಿದ್ದ ಆಸ್ಕರ್ ಫನಾರ್ಂಡೀಸ್ ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ.
ಕೆಲ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಗುಣಮುಖರಾಗಿ ಮನೆಗೆ ಮರಳುತ್ತಾರೆ ಎನ್ನುವ ಹೊತ್ತಿನಲ್ಲಿ ಈ ಆಘಾತದ ಸುದ್ದಿ ಬಂದಿದೆ.
ಐದು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದರು ಅವರು. ಕೇಂದ್ರ ಸರಕಾರ ಮತ್ತು ರಾಜ್ಯದ ಕೊಂಡಿಯಾಗಿದ್ದರು.
ರಾಜ್ಯಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದರಲ್ಲದೆ, ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದರು.
ಪ್ರತಿಯೊಬ್ಬರನ್ನೂ ಅತ್ಯಂತ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಆಸ್ಕರ್ ಫನಾರ್ಂಡೀಸ್ ಅವರು, ದೇಶ ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ರಾಜಕೀಯವನ್ನು ಮೀರಿ ಎಲ್ಲರನ್ನೂ ಆದರಿಸುತ್ತಿದ್ದರು. ಪಕ್ಷ ರಾಜಕಾರಣಕ್ಕೆ ಮೀರಿದ ವ್ಯಕ್ತಿತ್ವ ಅವರದ್ದು.
ಕಾಂಗ್ರೆಸ್ ಕಟ್ಟಾಳುವಾಗಿದ್ದ ಅವರು ಪಕ್ಷವನ್ನು ಮಾತೃಸ್ವರೂಪದಂತೆ ಕಂಡವರು. ನಿಷ್ಠೆ, ನಂಬಿಕೆಯ ಪ್ರತೀಕವಾಗಿದ್ದರು. ಕಾಂಗ್ರೆಸ್ ಸಂಸ್ಕøತಿಗೆ ಎಲ್ಲೂ ಚ್ಯುತಿ ಬಾರದಂತೆ ನಡೆದುಕೊಂಡರು.
ಅವರಿಗೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.