ಮುಹೂರ್ತ ಇಟ್ಟಿದ್ದೇವೆ, ಕಾದು ನೋಡೋಣ : ಹಳ್ಳಿಹಕ್ಕಿ ಹೊಸ ಬಾಂಬ್
ಮೈಸೂರು : ರಾಜ್ಯದಲ್ಲಿ ಕೊರೊನಾ ಕಾಟದ ಮಧ್ಯೆ ಸಿಎಂ ಬದಲಾವಣೆ ಬಗ್ಗೆ ಗುಪ್ತ್ ಗುಪ್ತ್ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ನಾಯಕತ್ವ ಬದಲಾವಣೆಗೆ ಪುಷ್ಠಿ ಕೊಟ್ಟಂತೆ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ್ದ ಎಚ್. ವಿಶ್ವನಾಥ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಹಲವು ವಿಚಾರಕ್ಕೆ ಮೂಹೂರ್ತ ಇಟ್ಟಿದ್ದೇವೆ.
ಸಿದ್ದರಾಮಯ್ಯ ಸೋಲಿಗೂ ಇಲ್ಲೇ ಮುಹೂರ್ತ ಇಟ್ಟಿದ್ದು. ಸಮ್ಮಿಶ್ರ ಸರ್ಕಾರ ಪತನಕ್ಕೂ ಇಲ್ಲೇ ಮುಹೂರ್ತ ಇಟ್ಟಿದ್ದು. ಯಡಿಯೂರಪ್ಪ ಸಿಎಂ ಆಗುವುದಕ್ಕೂ ಮುಹೂರ್ತ ಇಟ್ಟಿದ್ದು ಇಲ್ಲಿಯೇ.
ನಂತರದ ಹಲವು ಬೆಳವಣಿಗೆ ಪ್ರಸಾದ್ ಮನೆ ಸಾಕ್ಷಿ ಆಗಿದೆ. ಈಗಲೂ ಪ್ರಸಾದ್ ಭೇಟಿಯ ಜೊತೆ ರಾಜಕೀಯ ಹಾಗೂ ಜಿಲ್ಲೆಯ ವಿದ್ಯಮಾನದ ಬಗ್ಗೆ ಮಾತನಾಡಿದ್ದೇವೆ.
ಸದ್ಯಕ್ಕೆ ಯಾವ ವಿಚಾರಕ್ಕೆ ಮುಹೂರ್ತ ಎಂದು ಹೇಳುವುದಿಲ್ಲ. ಕಾದು ನೋಡೋಣ. ಸಿಎಂ ಯಡಿಯೂರಪ್ಪ ಅವರಿಗೆ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸರಿಯಾಗಬೇಕು.
ಅದರ ಜೊತೆ ರಾಜ್ಯದ ಆಡಳಿತದ ಆರೋಗ್ಯವು ಸರಿಯಾಗಬೇಕು. ಇದಕ್ಕಾಗಿ ಹೈಕಮಾಂಡ್ ಶೀಘ್ರವೇ ಒಂದು ತೀರ್ಮಾನ ಕೈಗೊಳ್ಳಬೇಕು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಸಿಪಿ ಯೋಗೇಶ್ವರ್ ವಿರುದ್ಧ ಬಿಎಸ್ ವೈ ಆಪ್ತರು ಗರಂ ಆಗಿದ್ದಾರೆ. ಇದೀಗ ವಿಶ್ವನಾಥ್ ಕೂಡ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.