ಟೆಲ್ ಅವಿವ್: ಇಸ್ರೇಲ್ ನ ಇಬ್ಬರು ವೃದ್ಧ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.
ಮಾನವೀಯ ಕಾರಣದಿಂದಾಗಿ ಇಬ್ಬರು ವೃದ್ಧ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಮಾನವೀಯ ಹಾಗೂ ಅವರ ಆರೋಗ್ಯದ ಕಾಳಜಿಯ ಹಿನ್ನೆಲೆ ನಾವು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಹಮಾಸ್ ಹೇಳಿದೆ.
ಬಿಡುಗಡೆಯಾದ ಒತ್ತೆಯಾಳುಗಳನ್ನು ನೂರಿಟ್ ಕೂಪರ್ (79) ಹಾಗೂ ಯೋಚೆವೆಡ್ ಲಿಫ್ಶಿಟ್ಜ್ (85) ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಜಾ ಗಡಿಯ ಹತ್ತಿರ ಇರುವ ನಿರ್ ಓಜ್ನ ಕಿಬ್ಜತ್ಜ್ನಲ್ಲಿ ಈ ಇಬ್ಬರು ವೃದ್ಧೆಯರನ್ನು ಅವರ ಪತಿಯರೊಂದಿಗೆ ಹಮಾಸ್ ಉಗ್ರರು ಒತ್ತೆಯಾಳಾಗಿ ಮಾಡಿಕೊಂಡಿದ್ದರು. ಸದ್ಯ ಆರೋಗ್ಯದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದು, ಅವರ ಪತಿಯರನ್ನು ಮಾತ್ರ ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿದೆ.
ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ಕ್ರಾಸ್ ಒತ್ತೆಯಾಳುಗಳ ಬಿಡುಗಡೆಯನ್ನು ಸುಗಮಗೊಳಿಸಿದೆ ಎಂದು ತಿಳಿಸಿದೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಗಾಜಾ ಪಟ್ಟಿ ಬಳಿ ದಾಳಿ ನಡೆಸಿ ಇಸ್ರೇಲಿ ಪ್ರಜೆಗಳು ಸೇರಿದಂತೆ ನೂರಾರು ಜನರನ್ನು ಅಪಹರಿಸಿದ್ದರು. ಅವರನ್ನೆಲ್ಲ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಇತ್ತೀಚೆಗೆ ಅಮೆರಿಕ ಮೂಲದ ಜುಡಿತ್ ಹಾಗೂ ನಟಾಲಿ ರಾನನ್ ಅವರನ್ನು ಹಮಾಸ್ ಬಿಡುಗಡೆ ಮಾಡಿದೆ. ಒಂದು ಅಂದಾಜಿನಂತೆ 220ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಹಮಾಸ್ ವಶದಲ್ಲಿದ್ದಾರೆ.