ಅಭಿಮಾನ ಆವೇಶವಾಗಬಾರದು : ಆವೇಶ ಅವಗಢಗಳಿಗೆ ಕಾರಣವಾಗಬಾರದು – ಹಂಸಲೇಖ
ಇತ್ತೀಚೆಗೆ ಪೇಜಾವರ ಶ್ರೀಗಳ ಮೇಲಿನ ಹೇಳಿಕೆ ನಂತರ ಹಂಸಲೇಖ ಅವರ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಕೂಡ ಕೊಟ್ಟಿದ್ದರು, ಆದರೆ ಹಂಸಲೇಖ ಅವರು ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದು ಹಂಸಲೇಖ ಸ್ಪಷ್ಟನೆ ನೀಡಿದ್ದಾರೆ.
ಹಂಸಲೇಖ ಅವರು ಬರೆದಿರುವ ಪತ್ರದಲ್ಲೇನಿದೆ..?
ನಾನು ಆರೋಗ್ಯವಾಗಿದ್ದೀನಿ. ನನಗೆ ಆರೋಗ್ಯ ತಪ್ಪಿದೆ ಅಂತ ಇಡೀ ಕರ್ನಾಟಕದಿಂದ ಕರೆಗಳು ಬಂದಿವೆ.. ಎಲ್ರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ.. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿ ಪಡೆಯೋಕೆ ನಾನು ತುಂಬಾನೇ ಸವೆದಿದ್ದೇನೆ.. ಸಹಿಸಿದ್ದೇನೆ.. ಅದರ ಸುಖ ಇವತ್ತು ಅನುಭವಿಸುತ್ತಿದ್ದೇನೆ.
ನಾನು ಕೇಳದೇ ನನ್ನ ಮನೆಗೆ ಸರ್ಕಾರ ಭದ್ರತೆ ಕೊಟ್ಟಿದೆ.. ಕೇಳದೇ ಇಡೀ ಕರ್ನಾಟಕದಲ್ಲಿ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರ ಮಾತನಾಡ್ತಿದ್ದಾರೆ.. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸಿದೆ.. ಅಭಿಮಾನ ಆವೇಶವಾಗಬಾರದು : ಆವೇಶ ಅವಗಢಗಳಿಗೆ ಕಾರಣವಾಗಬಾರದು..! ಅಭಿಮಾನ ಹಾಡಿನಂತೆ ಇರಬೇಕು, ಹಾಡು ಕೇಳಿಸುತ್ತದೆ.. ಮುಟ್ಟಿಸುತ್ತದೆ. ನಿಮ್ಮ ಪ್ರೀತಿ ನನಗೆ ತಲುಪಿದೆ. ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು ಎಂದಿದ್ದಾರೆ.