ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸಿ : ಶಂಕರ್ ದ್ವಾರಕನಾಥ್ ಗುಹಾ
ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಡಾ.ಶಂಕರ್ ದ್ವಾರಕನಾಥ್ ಗುಹಾ ಆಗ್ರಹಿಸಿದ್ದಾರೆ.
ಪ್ರರಕಣ ಸಂಬಂಧ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಶಂಕರ್ ದ್ವಾರಕನಾಥ್ ಗುಹಾ ಅವರು, ಈಗಾಗ್ಲೆ ಪ್ರಕರಣ ದಾಖಲಾಗಿ 2 ವರ್ಷ ಕಳೆದಿದೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎರಡು ವರ್ಷ ಕಳೆದರೂ ಠೇವಣಿದಾರರಿಗೆ ನ್ಯಾಯ ಸಿಕ್ಕಿಲ್ಲ. ಈಗಾಗ್ಲೇ 70 ಜನ ಠೇವಣಿದಾರರು ಮನನೊಂದು ವಿವಿಧ ಕಾಯಿಲೆಗೆ ತುತ್ತಾಗಿ ಸತ್ತಿದ್ದಾರೆ. ಇನ್ನೂ 6 ತಿಂಗಳ ಕಾಲ ಬ್ಯಾಂಕ್ ನ ವಹಿವಾಟು ಯಥಾಸ್ಥಿತಿಯಲ್ಲಿ (ಯಾವುದೇ ರೀತಿಯ ವ್ಯವಹಾರ ನಡೆಸದಂತೆ) ಇರಬೇಕು ಎಂಬ ಆದೇಶ ಬಂದಿದೆ. ಇದರಿಂದ ಠೇವಣಿದಾರರ ಹಣ ಬ್ಯಾಂಕ್ ನಿಂದ ತೆಗೆಯಲು ಆಗುತ್ತಿಲ್ಲ. ಸದ್ಯ ಈ ಪ್ರಕರಣವನ್ನ ಸಿಐಡಿಗೆ ನೀಡಲಾಗಿದೆ. ಆದರೆ ಸಿಐಡಿಗೆ ಈ ತನಿಖೆ ಮಾಡಲು ಬ್ಯಾಂಡ್ವಿತ್ ಇಲ್ಲ. ಹೀಗಾಗಿ ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಹೂಡಿಕೆದಾರರ ಪರವಾಗಿ ಆಗ್ರಹಿಸಿದರು.
ಈ ಬ್ಯಾಂಕ್ ಗೆ ಆರ್ ಬಿಐ ಸತತವಾಗಿ ಎ ಗ್ರೇಡ್ ಸರ್ಟಿಫಿಕೇಟ್ ನೀಡಿದೆ. ಇದನ್ನ ಗಮನಿಸಿದ್ರೆ ಇದರಲ್ಲಿ ಆರ್ಬಿಐನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಂತಹ ವಂಚಕ ಬ್ಯಾಂಕ್ ಗೆ ಆರ್ ಬಿ ಐ ಎ ಗ್ರೇಡ್ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇನ್ನು ವಂಚನೆ ನಡೆಸಿದ ಬ್ಯಾಂಕ್ ಈಗ ಬೇರೆ ಬೇರೆ ಕಡೆ ಬ್ರಾಂಚ್ ಗಳನ್ನ ತೆರೆಯಲು ಅವಕಾಶ ಮಾಡಿ ಕೊಡಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಇರೋದು ಪಕ್ಕಾ ಆಗಿದೆ. ಈ ಪ್ರಕರಣದ ಬಗ್ಗೆ ಕೇಳಿದ್ರೆ ಸಂಸದರು ಉಡಾಫೆ ಉತ್ತರ ಕೊಡ್ತಾರೆ. ಈ ಸಮಸ್ಯೆಯನ್ನು ಸಂಸದರು ಹಾಗೂ ಶಾಸಕರ ಕೈಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ ಮಧ್ಯಪ್ರವೇಶ ಮಾಡಬೇಕು, ನೊಂದಿರುವ ಠೇವಣಿದಾರರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಜುಲೈ 14 ನೇ ತಾರೀಖು ಆಡಿಟ್ ರಿಪೋಟ್ ಕೊಡ್ತೀವಿ ಅಂತ ಹೇಳಿದ್ದಾರೆ.ಇದನ್ನ ಕೊಡದೆ ಇದ್ದಾರೆ ಆರ್ ಬಿಐ ಚಲೋ ಮಾಡಿ ನ್ಯಾಯ ಕೇಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಠೇವಣಿದಾರ ಹರೀಶ್ ಮಾತನಾಡಿ, ಈ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ ಠೇವಣಿದಾರರೆಲ್ಲಾ ಬಹುತೇಕರು ಹಿರಿಯನಾಗರಿಕರಾಗಿದ್ದು,
ಕಳೆದ ವಾರ ನಾವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿದ್ದೆವು. ಆಗ ಅವರನ್ನ ನ್ಯಾಯ ಕೊಡಿಸಿ ಎಂದು ಕೇಳಿದಾಗ, ನನ್ನನ್ನ ಕೇಳಿ ಹಣ ಇಟ್ಟಿದ್ರಾ ಅಂತಾ ಬೇಜವಾಬ್ದಾರಿ ಉತ್ತರ ಕೊಟ್ಟರು ಎಂದು ಕೇಂದ್ರ ವಿತ್ತ ಸಚಿವೆ ಮಾತಿಗೆ ಬೇಸರ ಹೊರಹಾಕಿದರು.
ಇನ್ನು ಫಾರೆನ್ಸಿಕ್ ಆಡಿಟ್ ಇನ್ನು ಆಗೇ ಇಲ್ಲಾ, ಈ ಹಗರಣದಲ್ಲಿ ಬಿಜೆಪಿಯ ಮಾಜಿ ಎಮ್ ಎಸ್ಸಿ ಆಶ್ವಥ್ ನಾರಾಯಣ್ ಡೀಫಾಲ್ಟರ್ ಆಗಿದ್ದು, 12 ಕೋಟಿ ರೂಪಾಯಿ ಹಣ ಕಟ್ಟಿಲ್ಲ ಎಂದು ಆರೋಪಿಸಿದರು. ಜೊತೆಗೆ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು.
ಸಿಎಂ ಯಡಿಯೂರಪ್ಪ ಈ ಬಗ್ಗೆ ಗಮನ ನೀಡಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೆ ತುರ್ತು ಕ್ರಮ ಜರುಗಿಸದೇ ಇದ್ರೆ ಆರ್ ಬಿ ಐ ಚಲೋ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಆರ್ ಬಿ ಐ ಕೂಡ ಈ ವಂಚನೆಗಳನ್ನ ನೋಡಿಕೊಂಡು ಯಾಕೆ ಸುಮ್ಮನಿದೆ ಎಂದು ಪ್ರಶ್ನಿಸಿದ ಹರೀಶ್, ಈ ಸಂಬಂಧ ಆರ್ ಬಿ ಐ ತುರ್ತಾಗಿ ಕ್ರಮಕೈಗೊಳ್ಳಬೇಕಿದೆ. 25 ಸಾವಿರ ಜನ ಹಣವನ್ನ ಕಳೆದುಕೊಂಡಿದ್ದಾರೆ. 2130 ಕೋಟಿ ರೂಪಾಯಿ ಗ್ರಾಹಕರಿಗೆ ವಾಪಸ್ ಬರಬೇಕಿದೆ. ಆದರೆ ಆರ್ ಬಿ ಐ ಮಾತ್ರ ಸ್ಪಷ್ಟ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ಹೊರಹಾಕಿದರು. ಈಗಾಗಲೇ ಹಣ ಕಳೆದುಕೊಂಡ ಹಲವರು ಸಾವನ್ನಪ್ಪಿದ್ದಾರೆ. ಆದಾಗ್ಯೂ ಆಡಿಟ್ ರಿಪೋರ್ಟ್ ನೆಪದಲ್ಲಿ ಸಮಯ ತಳ್ಳುತ್ತಿದ್ದಾರೆ. ವಿಳಂಬದ ಹಿಂದೆ ರಾಜಕೀಯ ಹಿತಾಸಕ್ತಿ ಕಾಣುತ್ತಿದೆ ಎಂದು ಸ್ಥಳಿಯ ರಾಜಕಾರಣಿಗಳ ವಿರುದ್ಧ ಹಣ ಹೂಡಿಕೆದಾರ ಹರೀಶ್ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಕೂಡ ಉಪಸ್ಥಿತರಿದ್ದರು.