ಆತ ಗಣಿತ ಪಂಡಿತನಲ್ಲ… ವಿಜ್ಞಾನಿಯೂ ಅಲ್ಲ.. ಸಂಶೋಧಕನೂ ಅಲ್ಲ… ಕಂಪ್ಯೂಟರ್ ತಜ್ಞನೂ ಅಲ್ಲ.. ಆದ್ರೆ ಆತ ಎಲ್ರರ ಲೆಕ್ಕಾಚಾರಗಳನ್ನ ದಾಟಿ ಆಡಿದವನು… ಆಟವನ್ನ ಕೇವಲ ಆಟವನ್ನಾಗಿದೇ, ಬದುಕನ್ನಾಗಿದವನು… ಆಟದಲ್ಲಿ ಯಾರು ಏರದ ಎತ್ತರಕ್ಕೇರಿದವನು.. ಅವನೇ ಬ್ಯಾಟಿಂಗ್ ಬಲಾಡ್ಯ ಸಚಿನ್ ತೆಂಡುಲ್ಕರ್
ನಮ್ಮ ಭವಿಷ್ಯ ಬ್ರಹ್ಮ ಬರೀತಾನಂತೆ.. ಆದ್ರೆ ಆತನ ಲಿಪಿ ನಮಗೆ ಅರ್ಥ ಆಗೊಲ್ಲ.. ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳುವುದಿದೆಯಲ್ಲಾ, ಅದು ಬ್ರಹ್ಮ ಲಿಪಿಗಿಂತಲೂ ಮೀರಿದ್ದು. ಇಂತಹ ಅಚ್ಚರಿಯನ್ನ ಸಾಧಿಸುವವರು ತೀರಾ ವಿರಳ.. ಆದ್ರೆ ಸಚಿನ್ ತೆಂಡುಲ್ಕರ್ ತನ್ನ ಭವಿಷ್ಯವನ್ನ ತಾನೇ ಬರ್ಕೊಂಡಿದ್ದಾರೆ.. ಇದೀಗ ಅದು ಅಕ್ಷರಗಳಲ್ಲಿ ಬಣ್ಣಿಸಲ್ಪಡುತ್ತಿವೆ…
ನಿಜ,.. ಈ ಸಾಧಕನನ್ನು ವರ್ಣಿಸಲು ಪದಪುಂಜಗಳಿಲ್ಲ. ಮಾಡಿರುವ ಸಾಧನೆಗಳನ್ನ ಲೆಕ್ಕ ಹಾಕಲು ಸಾಧ್ಯವಿಲ್ಲ. ಅಂಕಿ –ಅಂಶಗಳನ್ನ ಎಣಿಸೋಕೆ ಆಗಲ್ಲ.. ದಾಖಲೆಗಳನ್ನ ಕೈಬೆರಳಿನಲ್ಲಿ ಕೌಂಟ್ ಮಾಡಲು ಸಾಧ್ಯವಿಲ್ಲ. ಬರೆಯೋಕೆ ಹೊರಟ್ರೆ ಪೆನ್ನು – ಕಾಗದಗಳು ಸಾಕಾಗೊಲ್ಲ. ಬಹುಶ: ಕಂಪ್ಯೂಟರ್‌ನ ಮೊಮೊರಿ ಕೂಡ ಫುಲ್ ಆಗೋದ್ರಲ್ಲಿ ಡೌಟ್ಟೇ ಇಲ್ಲ.
ಕ್ರಿಕೆಟ್ ಬ್ರಹ್ಮನ ಜಾತಕ
1617 ಪಂದ್ಯ
84,307 ರನ್
142 ಶತಕ
507 ಅರ್ಧಶತಕ
474 ವಿಕೆಟ್
ಅಂದ ಹಾಗೇ ಸಚಿನ್ ತೆಂಡುಲ್ಕರ್ ಇಲ್ಲಿಯವರೆಗೆ ಒಟ್ಟು 1616 ಪಂದ್ಯಗಳನ್ನ ಆಡಿದ್ದಾರೆ. ಪೇರಿಸಿರುವ ರನ್‌ಗಳ ಸಂಖ್ಯೆ 84 ಸಾವಿರದ 307.. ಇದ್ರಲ್ಲಿ 142 ಶತಕ ಹಾಗೂ 507 ಅರ್ಧಶತಕಗಳಿವೆ.. ಅಷ್ಟೇ ಅಲ್ಲ, ಬೌಲಿಂಗ್‌ನಲ್ಲೂ ಜಾದು ಮಾಡಿರುವ ಸಚಿನ್ 474 ವಿಕೆಟ್ ಕಬಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಸ್ಟರ್
ಇಲ್ಲಿಯವರೆಗೆ 199 ಟೆಸ್ಟ್ ಪಂದ್ಯಗಳನ್ನ ಆಡಿರುವ ಸಚಿನ್ 15,847 ರನ್ ದಾಖಲಿಸಿದ್ದಾರೆ. 51 ಶತಕ ಹಾಗೂ 67 ಅರ್ಧಶತಕಗಳು ಸಚಿನ್ ಹೆಸರಿನಲ್ಲಿವೆ. ಹಾಗೇ 46 ವಿಕೆಟ್ ಕಬಳಿಸಿದ್ದಾರೆ. .
ಏಕದಿನ ಕ್ರಿಕೆಟ್‌ನಲ್ಲಿ ಕ್ರಿಕೆಟ್ ದೇವ್ರು
ಆರು ವಿಶ್ವಕಪ್ ಸೇರಿದಂತೆ ಸಚಿನ್ 463 ಏಕದಿನ ಪಂದ್ಯಗಳನ್ನ ಆಡಿದ್ದಾರೆ. 49 ಶತಕ ಹಾಗೂ 96 ಅರ್ಧಶತಕಗಳು ಸೇರಿದಂತೆ ಒಟ್ಟು18,426 ರನ್ ಕಲೆ ಹಾಕಿದ್ದಾರೆ. ಜತೆಗೆ 154 ವಿಕೆಟ್ ಬುಟ್ಟಿಗೆ ಹಾಕೊಂಡಿದ್ದಾರೆ.
Happy Birthday Sachin Tendulkar: fans wishes for ‘God of Cricket
ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ತೆಂಡುಲ್ಕರ್
ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಡುವೆಯೂ ಸಚಿನ್ 307 ಪ್ರಥಮ ದರ್ಜೆಯ ಪಂದ್ಯಗಳನ್ನ ಆಡಿದ್ದಾರೆ. ಇದ್ರಲ್ಲಿ81 ಶತಕ ಹಾಗು 114 ಅರ್ಧಶತಕಗಳಿವೆ. 70 ವಿಕೆಟ್ ಪಡೆದುಕೊಂಡು ಒಟ್ಟು 25, 228 ರನ್ ಕೂಡ ಹಾಕಿದ್ದಾರೆ.
ಲೀಸ್ಟ್ ಎ ಪಂದ್ಯಗಳಲ್ಲಿ ಮುಂಬೈಕರ್
551 ಲೀಸ್ಟ್ ಎ ಪಂದ್ಯಗಳನ್ನ ಅಡಿರುವ ತೆಂಡುಲ್ಕರ್ 21999 ರನ್ ಪೇರಿಸಿದ್ದಾರೆ. ಇದ್ರಲ್ಲಿ 60 ಶತಕ ಹಾಗೂ 114 ಅರ್ಧಶತಕಗಳು ಸೇರಿಕೊಂಡಿವೆ. 201 ವಿಕೆಟ್‌ಗಳು ಸಚಿನ್ ಮ್ಯಾಜಿಕ್‌ಗೆ ಬಲಿಯಾಗಿವೆ.
ಚುಟುಕು ಕ್ರಿಕೆಟ್‌ನಲ್ಲಿ ಬ್ಲ್ಯಾಸ್ಟರ್
ಸಚಿನ್ ಕೇವಲ ಒಂದೇ ಒಂದು ಟಿ-ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯವನ್ನ ಆಡಿದ್ದಾರೆ. ಆದ್ರೆ ರನ್ ಗಳಿಸಿದ್ದು ಮಾತ್ರ ಹತ್ತು. ಹಾಗೇ 96 ಐಪಿಎಲ್ ಟಿ-ಟ್ವೆಂಂಟಿ ಪಂಧ್ಯಗಳನ್ನ ಆಡಿದ್ದು ಒಂದು ಶತಕ ಸಿಡಿಸಿದ್ದಾರೆ. 16 ಅರ್ಧಶತಕಗಳು ಸೇರಿದಂತೆ 2797 ರನ್‌ಗಳು ಸಚಿನ್ ಬ್ಯಾಟಿಂಗ್‌ನಿಂದ ಹೊರಹೊಮ್ಮಿವೆ.
ಇಷ್ಟೆಲ್ಲಾ ಸಾಧನೆ, ದಾಖಲೆಗಳನ್ನ ಮಾಡಬೇಕಾದ್ರೆ ಸಚಿನ್ ಎಷ್ಟೊಂದು ಕಷ್ಟಪಟ್ಟಿರಲಿಕ್ಕಿಲ್ಲ. .ಅದನ್ನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಊಹಿಸಿಕೊಳ್ಳಲು ಆಗೊಲ್ಲ. ಯಾಕಂದ್ರೆ ಈ ಸಾಧನೆಯ ಹಿಂದೆ ಆಗಾಧವಾದ ಪರಿಶ್ರಮವಿದೆ. ಅಪಾರವಾದ ಶ್ರದ್ದೆ ಇದೆ. ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರಿಕೆ ಇದೆ. ಗಂಭೀರತೆ ಇದೆ.
ಇನ್ನು, 40ರ ಸಚಿನ್ 30 ವರ್ಷಗಳನ್ನ ಮೈದಾನದಲ್ಲಿ ಕಳೆದಿದ್ದಾರೆ. ಯಾಕಂದ್ರೆ ತೆಂಡುಲ್ಕರ್‌ಗೆ ಮೈದಾನವೇ ಮನದ ಮನೆಯಾಗಿತ್ತು. ಅಪ್ಪನ ಅಕ್ಕರೆ, ಅಮ್ಮನ ಮಮತೆ, ಹೆಂಡತಿಯ ಪ್ರೀತಿ, ಮಕ್ಕಳ ವಾತ್ಸಲ್ಯಕ್ಕೆ ಮೀರಿ ಅಣ್ಣನ ಆಶಯದ ಹಾದಿಯಲ್ಲಿ ಸಚಿನ್ ಮೈಮರೆತ್ರು. ಗುರುವಿನ ಗುರಿಯತ್ತ ಮುನ್ನಡೆದ್ರು.
ಹೌದು, ಕ್ರಿಕೆಟ್‌ನ ಪ್ರತಿಯೊಂದು ಶಾಟ್ಸ್ ಗಳನ್ನ ಕಲಿಯಲು ಸಚಿನ್ ಲೆಕ್ಕವಿಲ್ಲದಷ್ಟು ಬೆವರು ಸುರಿಸಿದ್ದಾರೆ.. ಬ್ಯಾಟಿಂಗ್ ಟಿಪ್ಸ್ ಗಳನ್ನ ಹಿರಿಯರಿಂದ ಕೇಳಿ ತಿಳಿದುಕೊಂಡಿದ್ದಾರೆ. ಹೊಸ ಹೊಸ ಶಾಟ್ಸ್ ಗಳನ್ನ ಅನ್ವೇಷನೆ ಕೂಡ ಮಾಡಿದ್ದಾರೆ. ಇನ್ನು, ಬ್ಯಾಟಿಂಗ್ ತಾಲೀಮ್ ನಡೆಸುವಾಗ ಎದುರಿಸಿದ ಚೆಂಡುಗಳನ್ನ ಬಹುಶಃ ಸಚಿನ್ ಕೂಡ ನೆನಪಿಟ್ಟುಕೊಂಡಿರಕ್ಕಿಲ್ಲ. ಆದ್ರೆ ನೆಟ್ಸ್ ನಲ್ಲಿ ತನಗೆ ಯಾರು ಯಾರು ಬೌಲಿಂಗ್ ಮಾಡಿದ್ದಾರೆ ಅಂತ ಸಚಿನ್ ಈಗಲೂ ನೆನಪಿಟ್ಟುಕೊಂಡಿದ್ದಾರೆ.
ಮೈದಾನದಲ್ಲಿ ರನ್ ಮೇಷಿನ್ ನಂತೆ ರನ್ ಪೇರಿಸಿದ ಮಾಂತ್ರಿಕನ ಕೆಲವೊಂದು ಇನಿಂಗ್ಸ್ ಗಳು, ಎಂದು ಕಣ್ಣಂಚಿನಿಂದ ಮರೆಯಾಗುವುದಿಲ್ಲ. ಸಚಿನ್ ಆಟ ನಿಲ್ಲಿಸಲು ಈಗ ತಯಾರು ಆಗಿರಬಹುದು.. ಆದ್ರೆ ಅವ್ರು ಆಡಿದ ಆಟ ಅವ್ರನ್ನುಕಾಡದೇ ಬಿಡುವುದಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ಪ್ರತಿಯೊಬ್ಬರ ಬಾಯಲ್ಲೂ ಇವತ್ತು ಸಚಿನ್ ಹೆಸರು ನಲಿದಾಡುತ್ತಿದೆ. ಅದಕ್ಕೆ ಕಾರಣ ಸಚಿನ್‌ಗೆ ಕ್ರಿಕೆಟ್ ಮೇಲಿರುವ ಪ್ರೀತಿಯಷ್ಟೇ.
ಅದೇನೇ ಇರಲಿ, ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಭರವಸೆ, ಕನಸು ಮೂಡುವ ಮೊದಲೇ ಹೆಜ್ಜೆ ಇರಿಸಿ ಆಗಿತ್ತು. ಭರವಸೆ, ಕನಸು ಬಲಿತಂತೆ ಸಾಧನೆಯ ಹರವನ್ನ ವಿಸ್ತರಿಸುತ್ತಾ ಸಾಗಿದ್ರು. ಅವ್ರು ಮೂಡಿಸಿದ ಪ್ರತಿಯೊಂದು ಹೆಜ್ಜೆ ಯ ಗುರುತು ಮೈಲಿಗಲ್ಲಾದವು. ಮೀರಿ ನಿಲ್ಲುವ ಹಠಸಾಧಕನ ಎದೆ ಆರಂಭದಲ್ಲಿಯೇ ಝಲ್ ಎನ್ನದಿರದು. ಒಂದೊಮ್ಮೆ ಮೀರಿದ್ರೆ ಅತಿಶಯವೇ. happy birthday sachin