ಭವಿಷ್ಯ ಸುಂದರಗೊಳಿಸುವ ಆಶಾಜ್ಯೋತಿಯೊಂದಿಗೆ ಬಂದಿದೆ ಮತ್ತೊಮ್ಮೆ ದೀಪಾವಳಿ… Saakshatv deepavali 2020
ಮಂಗಳೂರು, ನವೆಂಬರ್ 14: ದೀಪದಿಂದ ದೀಪವ ಹಚ್ಚಬೇಕು ಮಾನವ…
ಪ್ರೀತಿಯಿಂದ ಪ್ರೀತಿ ಹಂಚಿರೋ….
ಮಣ್ಣಿನಿಂದ ಹಣತೆಯಾದರೇ…
ಬೀಜದಿಂದ ಎಣ್ಣೆಯಾಯಿತು….
ಅರಳೆಯಿಂದ ಬತ್ತಿಯಾದರೇ….
ಸುಡುವ ಬೆಂಕಿ ಜ್ಯೋತಿಯಾಯಿತು… Saakshatv deepavali 2020
ದೀಪಗಳ ಹಬ್ಬ ದೀಪಾವಳಿ ಮತ್ತೊಮ್ಮೆ ಬಂದಿದೆ… ದೈನಂದಿನ ಜೀವನದ ಒತ್ತಡ ಜಂಜಾಟಗಳಿಂದ ಬಸವಳಿದಿದ್ದ ನೀರಸ ಬದುಕನ್ನು ಸುಂದರಗೊಳಿಸಲು ಮನೆ ಮನಗಳಲ್ಲಿ ಬೆಳಕಿನ ಸಂಭ್ರಮವನ್ನು ಹೊತ್ತು ತಂದಿದೆ.

ದೀಪಾವಳಿ ಎಂದರೆ ಅದು ಕೇವಲ ಹಬ್ಬವಷ್ಟೇ ಅಲ್ಲ.. ಅದು ನೆನಪಿನ ಮೆರವಣಿಗೆ…
ನಮ್ಮ ಸಂಸ್ಕೃತಿ ಸಂಪ್ರದಾಯದ ಪ್ರತೀಕವಾಗಿರುವ ದೀಪಾವಳಿ ಎಂದರೆ ನೆನಪಾಗುವುದು ಬ್ರಾಹ್ಮಿಮುಹೂರ್ತದಲ್ಲಿನ ಎಣ್ಣೆ ಸ್ನಾನದ ಸಂಭ್ರಮ.. ನೆಲಕ್ಕೂ ಮೈಯಿಗೂ ಎಣ್ಣೆಯ ಅಭಿಷೇಕ… ಹೊಸ ಬಟ್ಟೆ ತೊಟ್ಟು ಸಾಲು ಸಾಲು ಹಣತೆಗಳನ್ನು ಬೆಳಗುವ, ಪಟಾಕಿ ಹಚ್ಚುವ ಸಂಭ್ರಮ ಸಡಗರ…
ದೀಪಾವಳಿಯ ದೀಪ ಎಂದರೆ ಅದು ಬರೀ ಬೆಳಕಲ್ಲ.. ಹೊಸತನದ ದ್ಯೋತಕ…
ಬದುಕಲ್ಲಿನ ಕತ್ತಲು ಕರಗಿ ಬೆಳಕು ಮೂಡಬಹುದೆಂಬ ಭರವಸೆ.. ಏಕತಾನತೆಯಿಂದ ಮಡುಗಟ್ಟಿದ ಬದುಕಿಗೆ ಚೈತನ್ಯವನ್ನು ನೀಡುವ ಬೆಳಕು…
ತುಳುನಾಡಿನಲ್ಲಿ ದೀಪಾವಳಿ ಹಬ್ಬ ಪ್ರಾರಂಭವಾಗುವುದು ನೀರು ತುಂಬುವ ಹಬ್ಬದಿಂದ.. ಹಿಂದಿನ ದಿನ ನೀರು ಕಾಯಿಸುವ ಹಂಡೆಯನ್ನು ಶುಚಿಗೊಳಿಸಿ, ಹೂವಿನಿಂದ ಅಲಂಕಾರ ಮಾಡಿ ನೀರು ತುಂಬಿಸಿಟ್ಟು ಪೂಜಿಸಿ, ಮರುದಿನ ಇನ್ನೂ ಸೂರ್ಯ ಮೂಡುವ ಮೊದಲೇ ಮಾಡುವ ಎಣ್ಣೆ ಸ್ನಾನದಿಂದ…
ದೀಪಾವಳಿ ಹಬ್ಬದ ಜೊತೆಗೆ ಬಾಲ್ಯದ ನೆನಪಿನ ಬುತ್ತಿಯೂ ಬಿಚ್ಚಿಕೊಳ್ಳುತ್ತದೆ… ಹಬ್ಬಕ್ಕಾಗಿ ದೂರದೂರಿನಲ್ಲಿರುವ ಕುಟುಂಬ ಸದಸ್ಯರ ಆಗಮನ.. ಮನೆ ತುಂಬಾ ಜನ.. ಬೆಳಗಿನ ಜಾವ 4 ಗಂಟೆಗೆ ಇನ್ನೂ ನಿದ್ದೆಯ ಮಡಿಲಿನಲ್ಲಿ ಬೆಚ್ಚಗೆ ಮಲಗಿರುತ್ತಿದ್ದ ನಮ್ಮನೆಲ್ಲಾ ಎಣ್ಣೆ ಸ್ನಾನಕ್ಕೆ ಎಬ್ಬಿಸುತ್ತಿದ್ದ ಅಜ್ಜನ ನೆನಪು ಸದಾ ಹಸಿರು…
ಎಣ್ಣೆ ಸ್ನಾನದ ಬಳಿಕ ಹೊಸ ಬಟ್ಟೆ ತೊಟ್ಟು ಹಿರಿಯರ ಆಶೀರ್ವಾದ ಪಡೆದು ಸಿಹಿ ಅವಲಕ್ಕಿ ಪ್ರಸಾದ ಜೊತೆಗೆ ಬಿಸಿ ಬಿಸಿ ಉದ್ದಿನ ದೋಸೆಯ ಉಪಹಾರ.. ಸಂಜೆಯಾಗುತ್ತಿದ್ದಂತೆ ಗೂಡು ದೀಪ ಏರಿಸಿ ಸಾಲು ಸಾಲು ಹಣತೆಗಳನ್ನು ಬೆಳಗುವ ಸಂಭ್ರಮ. ಬಳಿಕ ಸುರು ಸುರು ಕಡ್ಡಿ, ಮಾಲೆ ಪಟಾಕಿ, ಮಳೆ ದುರ್ಸುಗಳ ಅಬ್ಬರ..

ಎರಡನೇ ದಿನ ಅಮಾವಾಸ್ಯೆ. ಧನ ದೇವತೆ ಲಕ್ಷ್ಮೀಯನ್ನು ಇದೇ ಸಮಯದಲ್ಲಿ ಪೂಜಿಸಲಾಗುತ್ತದೆ. ಅಂಗಡಿ, ಉದ್ಯಮ, ವರ್ತಕರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡಿ, ಅಂಗಡಿ ಪೂಜೆ ನೆರವೇರಿಸುತ್ತಾರೆ.
ತುಳುನಾಡಿನಲ್ಲಿ ಹಿರಿಯರಿಗೆ ದೇವರ ಸ್ಥಾನ ನೀಡಿ ಪೂಜಿಸಲಾಗುತ್ತದೆ. ಕುಟುಂಬದಲ್ಲಿ ದೈವಾಧೀನರಾದ ಹಿರಿಯರನ್ನು ನೆನಪಿಸಿಕೊಂಡು ಈ ದಿನ ಹಿರಿಯರ ನೆನಪಿನಲ್ಲಿ ಕೆಲವು ವಿಧಿಗಳನ್ನು (ಪರ್ಬಗು ಬಳಸುನ) ಆಚರಿಸಲಾಗುತ್ತದೆ.
ಮರುದಿನ ಬಲಿಪಾಡ್ಯಮಿ.
ಅಂದು ವಿಶೇಷವಾಗಿ ಬಲೀಯೇಂದ್ರನನ್ನು ಕರೆಯಲಾಗುತ್ತದೆ ಹಾಗೂ ಜಾನುವಾರುಗಳನ್ನು ಪೂಜಿಸಲಾಗುತ್ತದೆ. ಬೆಳಗ್ಗೆ ಮನೆಯ ಜಾನುವಾರುಗಳಿಗೆ ಸ್ನಾನ ಮಾಡಿಸಿ, ಕೃಷಿ ಉಪಕರಣಗಳನ್ನು ಶುಚಿಗೊಳಿಸಿ ಜೋಡಿಸಲಾಗುತ್ತದೆ. ಬಳಿಕ ಅಂಗಳ ಅಥವಾ ಗದ್ದೆ ಬದಿಯಲ್ಲಿ ಪಾಲೆ (ಹಾಲೆ) ಮರದ ಕಂಬವನ್ನು ನೆಟ್ಟು, ಕಂಬದ ತುದಿಯ ಕವಲಿಗೆ ಕೋಲು ಕಟ್ಟಿ ಅಲಂಕರಿಸಲಾಗುತ್ತದೆ. ಬಳಿಕ ಮೇಲೊಂದು ಹಣತೆ ಹಚ್ಚಿ, ಬಲೀಂದ್ರ (ಬಲೀಂದ್ರ ಮರ)ವನ್ನು ಪ್ರತಿಷ್ಠಾಪಿಸಲಾಗುತ್ತದೆ.

ಕತ್ತಲೆಯಾಗುತ್ತಿದ್ದಂತೆಯೇ ಮನೆಯ ಅಂಗಳದ ಸುತ್ತಲೂ ದೀಪವನ್ನು ಬೆಳಗಿಸಲಾಗುತ್ತದೆ. ಗೋವಿಗೆ, ಬೇಸಾಯಕ್ಕೆ ಬಳಸುವ ಪರಿಕರಗಳಿಗೆ ಪೂಜೆಯನ್ನು ಮಾಡಲಾಗುತ್ತದೆ. ಜಾನುವಾರುಗಳಿಗೆ ದೀಪ ಬೆಳಗಿ ಹಬ್ಬದ ಬೆಳಕು ನೋಡು ಎಂದು ಪ್ರಾರ್ಥಿಸಿ, ಬಗೆ ಬಗೆಯ ಖಾದ್ಯಗಳನ್ನು ತಿನ್ನಿಸಲಾಗುತ್ತದೆ.
ನಂತರ ಎಲ್ಲರೂ ಬಲೀಂದ್ರ ಮರದ ಬಳಿ ಸೇರಿ ಆರತಿ ಬೆಳಗಿ, ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ‘ಬಲೀಂದ್ರ ಬಲೀಂದ್ರ ಕೂ…ಕೂ…’ ಎಂದು ಎಲ್ಲರೂ ಸೇರಿ ಮೂರು ಬಾರಿ ಕೂಗುತ್ತಾರೆ. ಇದು ಬಲೀಂದ್ರನನ್ನು ಭೂಮಿಗೆ ಸ್ವಾಗತಿಸುವ ಕ್ರಮ ಎಂದು ಇಲ್ಲಿನ ಹಿರಿಯರ ನಂಬಿಕೆ.
ಹಿಂದೆ ತುಳುನಾಡನ್ನು ಆಳಿದ ಬಲೀಂದ್ರ ಎಂಬ ಸತ್ಯಸಂಧನೂ ಧರ್ಮದುರಂಧರನೂ ಆಗಿದ್ದ ಅಸುರ ಚಕ್ರವರ್ತಿ ನಾಡಿನ ಜನರ ಯೋಗಕ್ಷೇಮ, ಮಳೆ ಬೆಳೆ, ಜಾನುವಾರುಗಳನ್ನು ನೋಡಿಕೊಂಡು ಹೋಗಲು ಪಾತಾಳದಿಂದ ಬರುತ್ತಾನೆ ಎಂಬುವುದು ಇಲ್ಲಿನ ಜನರ ನಂಬಿಕೆ. ವರ್ಷಕ್ಕೊಮ್ಮೆ ದೀಪಾವಳಿಯಂದು ತನ್ನ ನಾಡನ್ನು ನೋಡಲು ಬರುವ ಬಲಿ ಚಕ್ರವರ್ತಿಗೆ ದೀಪವನ್ನು ಬೆಳಗಿ ಈ ರೀತಿಯಲ್ಲಿ ತುಳುನಾಡಿನ ಜನತೆ ಸ್ವಾಗತ ಕೋರುತ್ತಾರೆ.
ಒಟ್ಟಿನಲ್ಲಿ ದೀಪಾವಳಿಯೆಂದರೆ, ತುಳುವರ ಬದುಕಿನ ಹೊಸ ಪುಟವನ್ನು ತಿರುವಿ ಹಾಕುವ, ಪ್ರೀತಿ ಸ್ನೇಹ ಸಹಬಾಳ್ವೆ ಮಮಕಾರ ಹಿರಿಯರ ಮೇಲಿನ ಗೌರವ ಮಿಳಿತವಾಗಿರುವ, ಎಲ್ಲರೂ ಒಟ್ಟಾಗಿ ಖುಷಿಯಿಂದ ಅರ್ಥಪೂರ್ಣವಾಗಿ ಸಂಭ್ರಮಿಸುವ ಆಚರಣೆ.
ಪುರಾಣದಲ್ಲಿ ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಹದಿನಾಲ್ಕು ವರ್ಷ ವನವಾಸ ಮುಗಿಸಿ ಅಯೋಧ್ಯೆಗೆ ಹಿಂತಿರುಗಿದ ಶ್ರೀ ರಾಮನನ್ನು ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ ದೀಪವನ್ನು ಹಚ್ಚಿ ಸ್ವಾಗತಿಸಿದರು. ಆ ಸಂಭ್ರಮವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ ಎಂದು ಒಂದು ಪುರಾಣದ ಕಥೆ ಹೇಳುತ್ತದೆ.

ಶ್ರೀಕೃಷ್ಣ, ನರಕಾಸುರನನ್ನು ವಧಿಸಿ, ಆತನ ಸೆರೆಯಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಿಡುಗಡೆ ಮಾಡುತ್ತಾನೆ.
ಆ ದಿನವನ್ನು ನರಕ ಚತುರ್ದಶಿ ಎಂದು ಆಚರಣೆ ಮಾಡಲಾಗುತ್ತದೆ ಎಂದು ಪುರಾಣದ ಮತ್ತೊಂದು ಕಥೆ ಹೇಳಿದರೆ, ಅಮವಾಸ್ಯೆಯ ದಿನ ಧನ ಹಾಗೂ ಭಾಗ್ಯದೇವತೆಯಾದ ಲಕ್ಷ್ಮಿ ದೇವಿಯು ಭೂಮಿಗೆ ಆಗಮಿಸುತ್ತಾಳೆ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ಹಾಗಾಗಿ ಹಣತೆ ದೀಪ, ಗೂಡುದೀಪಗಳಿಂದ ಮನೆ ಬೆಳಗಿಸಲಾಗುತ್ತದೆ ಎಂದು ಮಗದೊಂದು ಕಥೆ ತಿಳಿಸುತ್ತದೆ.
ವಿಷ್ಣುಪುರಾಣದ ಪ್ರಕಾರ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಬಲಿಪಾಡ್ಯದಂದು ಎತ್ತಿದ್ದು, ಹಾಗಾಗಿ ಅಂದು ಗೋಪೂಜೆ ಹಾಗೂ ಗೋವರ್ಧನನ ಪೂಜೆ ಮಾಡಲಾಗುತ್ತದೆ.

ದೀಪಾವಳಿ ಹಬ್ಬ ಮನೆ ಮನೆಗಳನ್ನು ಬೆಳಗಲಿ. ಕತ್ತಲಿನಿಂದ ಬೆಳಕಿನೆಡೆಗೆ.. ಅಜ್ಞಾನದಿಂದ ಸುಜ್ಞಾನದೆಡೆಗೆ ದೀಪಾವಳಿಯ ಬೆಳಕು ಪಸರಿಸಲಿ…ಕೊರೋನಾ ಮುಕ್ತ ವಿಶ್ವವಾಗಲಿ ಎಂಬ ಆಶಯದೊಂದಿಗೆ ಸಂಭ್ರಮದ ದೀಪಾವಳಿ ಹಬ್ಬವನ್ನು ಆಚರಿಸೋಣ..
ಓದುಗರಿಗೆಲ್ಲಾ ಸಾಕ್ಷಾಟಿವಿ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು…
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1325123272652910606?s=19








