‘A’ I AM GOD, GOD IS GREAT ಎಂದು ಸ್ಯಾಂಡಲ್ ವುಡ್ ಗೆ ‘ಸೂಪರ್’ ಎಂಟ್ರಿ ‘ಉಪೇಂದ್ರ’ ಅವರಿಗೆ ಇಂದು ಜನ್ಮದಿನ ಸಂಭ್ರಮ.
ಪ್ರೀತ್ಸೆ ‘ಪ್ರೀತ್ಸೆ’ ಎಂದು ಹಾಡಿ ‘H2O’ ಕುಡಿದು ‘ಹಾಲಿವುಡ್’ ನ ‘ಸೂಪರ್ ಸ್ಟಾರ್’ ಆಗಿ ಬೆಳೆದ ‘ಉಪ್ಪಿದಾದಾ’ ಹುಟ್ಟಿದ್ದು, 1968 ಸೆಪ್ಟೆಂಬರ್ 18 ಕುಂದಾಪುರದಲ್ಲಿ. ಇವರ ತಂದೆ ಮಂಜುನಾಥ್ ರಾವ್ ತಾಯಿ ಅನಸೂಯಾ.
1992ರಲ್ಲಿ ತೆರೆಗೆ ಬಂದ ‘ತರ್ಲೆನನ್ಮಗ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪೇಂದ್ರ ಮುಂದೆ 1993ರಲ್ಲಿ ‘ಶ್’ ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ ‘ಆಪರೇಷನ್ ಅಂತ’, ‘ಸ್ವಸ್ತಿಕ್’ ಚಿತ್ರಗಳನ್ನು ನಿರ್ದೇಶಿಸಿದರು.
1998ರಲ್ಲಿ ತೆರೆಗೆ ಬಂದ ‘ಎ’ ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮುಂದೆ ತೆರೆಗೆ ಬಂದ ‘ಉಪೇಂದ್ರ’ ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು.
ಇಲ್ಲಿಂದ ಮುಂದೆ 10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪ್ಪಿ, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ ‘ಸೂಪರ್’ ಮತ್ತು 2015ರಲ್ಲಿ ನಿರ್ದೇಶಿಸಿದ ‘ಉಪ್ಪಿ 2’ ಚಿತ್ರಗಳು ಶತದಿನ ಪೂರೈಸಿದವು.
ಸ್ಯಾಂಡಲ್ ವುಡ್ ನ ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಚಂದನವನದ ‘ಬುದ್ಧಿವಂತ’ ಅಂತಲೇ ಕರೆಸಿಕೊಳ್ಳುವ ಉಪ್ಪಿ, ರಿಯಲ್ ಲೈಫ್ ಗೆ ಹತ್ತಿರ ಇರುವ ಸಿನಿಮಾ ತೆಗೆಯುವುದಲ್ಲಿ ಪಂಟರ್. ಅವರ ಡೈಲಾಗ್ ಗಳಲ್ಲಿ ಕೌಂಟರ್. ತಲೆಕೆಡಿಸುವ ಚಿತ್ರಗಳ ಡೈರಕ್ಷನ್ ನಲ್ಲಿ ಮಾಸ್ಟರ್. ಹೀಗಾಗಿಯೇ ಉಪೇಂದ್ರ ರಿಯಲ್ ಸ್ಟಾರ್.
ತಮ್ಮ ಡಿಫರೆಂಟ್ ಮ್ಯಾನರಿಸಂ ನಿಂದಲೇ ಸಿನಿ ಜಗತ್ತಿನಲ್ಲಿ ತಮ್ಮಯಾದೇ ಛಾಪು ಮೂಡಿಸಿರುವ ‘ಕಠಾರಿ ವೀರ’ ಅಭಿಮಾನಿಗಳ ಚಕ್ರವರ್ತಿ. ಆಕಾಶದ ಎತ್ತರಕ್ಕೆ ಬೆಳೆದರೂ ಸರಳತೆಯೇ ‘ಬ್ರಹ್ಮ’ನ ಆಸ್ತಿ. ಚಂದನವದ ‘ಕುಟುಂಬ’ದಲ್ಲಿ ‘ಓಂಕಾರ’ ಹಾಕಿ ‘ಐಶ್ವರ್ಯ’ ತಂದ ‘ಮುಕುಂದ ಮುರಾರಿ’. `ಗಾಡ್ ಫಾದರ್’ ಇಲ್ಲದೇ ಬಂದ ‘ಟೋಪಿವಾಲಾ’ ನಮ್ಮೆಲ್ಲರಿಗೂ ಸ್ಪೂರ್ತಿ. ಹ್ಯಾಪಿ ಬರ್ತ್ ಡೇ ನಮ್ಮ ಪ್ರೀತಿಯ ಉಪ್ಪಿ.