ಇಂಫಾಲ್ : ರಾಜ್ಯಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಮಣಿಪುರದ ಆಡಳಿತ ರೂಢ ಬಿಜೆಪಿ ಸರ್ಕಾರಕ್ಕೆ ಭಾರಿ ಆಘಾತ ಎದುರಾಗಿದೆ. ಡಿಸಿಎಂ, ಮೂವರು ಬಿಜೆಪಿ ಶಾಸಕರು, ಮೈತ್ರಿಪಕ್ಷಗಳು ಸೇರಿದಂತೆ ಒಂಬತ್ತು ಶಾಸಕರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಭಾರಿ ಸಂಕಷ್ಟ ಎದುರಾಗಿದ್ದು, ರಾಜ್ಯಸಭೆ ಚುನಾವಣೆಯ ಲೆಕ್ಕಾಚಾರಗಳೂ ಬುಡಮೇಲಾಗಿದೆ.
ಕಾಂಗ್ರೆಸ್ ಸೇರಿದ ಬಿಜೆಪಿ ಶಾಸಕರು..
ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿರುವ ಬಿಜೆಪಿ ಶಾಸಕರಾಗಿದ್ದ ಸ್ಯಾಮ್ಯುಯೆಲ್ ಜೆಂಡೈ, ಟಿಟಿ ಹಾಕಿಪ್, ಸುಭಾಷ್ ಚಂದ್ರ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಮಾಜಿ ಮುಖ್ಯಮಂತ್ರಿ ಓ ಸಿ ಇಬೊಬಿ ಅವರು ಔಪಚಾರಿಕವಾಗಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಇದು ಒಂದು ಕಡೆಯಾದ್ರೆ ದೋಸ್ತಿಗೆ ಒಪ್ಪಿ ಬಿಜೆಪಿ ಜೊತೆ ಕೈ ಜೋಡಿಸಿದ್ದ ಸಚಿವರಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ನಾಲ್ವರು ಶಾಸಕರು ಸಹ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇನ್ನು ಶಾಸಕರಾದ ಡಿಸಿಎಂ ಎನ್ ಕಯಿಸಿ, ಲೆಟ್‌ಪಾವೊ ಹಾಕಿಪ್, ವೈ ಜಾಯ್‌ಕುಮಾರ್ ಮತ್ತು ಎಲ್ ಜಯಂತಕುಮಾರ್ ತಮ್ಮ ರಾಜೀನಾಮೆ ಪತ್ರಗಳನ್ನು ನಿನ್ನೆಯೇ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ. ಇವರ ಜೊತೆಗೆ ತೃಣಮೂಲ ಕಾಂಗ್ರೆಸ್‌ನ ಏಕೈಕ ಶಾಸಕ ಟಿ ರಬಿಂದ್ರೋ ಸಿಂಗ್ ಮತ್ತು ಪಕ್ಷೇತರ ಶಾಸಕ ಶಹಾಬುದ್ದೀನ್ ಕೂಡ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದಾರೆ.
ಈ ಹಿನ್ನೆಲೆ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಇಬೊಬಿ ಸಿಂಗ್ ಅವರು, ಮುಖ್ಯಮಂತ್ರಿ ಬಿರೆನ್ ಸಿಂಗ್ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಸೂಚಿಸಬೇಕೆಂದು ರಾಜ್ಯಪಾಲರಾದ ಡಾ.ನಜ್ಮಾ ಹೆಪ್ತುಲ್ಲಾ ಅವರನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.