ಹಾಸನ: ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿಯಲ್ಲಿ ಬಿಜೆಪಿ ಅನುಕೂಲವಾಗುವಂತೆ ಮೀಸಲಾತಿ ಪ್ರಕಟಿಸಿರುವುದು ಬಹುಮತ ಹೊಂದಿದ್ದರೂ ಅಧಿಕಾರದಿಂದ ವಂಚಿತವಾಗಿರುವ ಜೆಡಿಎಸ್ ಕೆಂಗಣ್ಣಿಗೆ ಗುರಿಯಾಗಿದೆ.
ನಿನ್ನೆ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಿಸಿತ್ತು. ಇದರಲ್ಲಿ ಹಾಸನ ಹಾಗೂ ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನವನ್ನು ಎಸ್.ಟಿ ಸಮುದಾಯಕ್ಕೆ ಮೀಸಲಿಟ್ಟು ಆದೇಶ ಹೊರಡಿಸಿದೆ. ಹಾಸನ ನಗರಸಭೆಗೆ ಬಿಜೆಪಿಯಿಂದ ಮಾತ್ರ ಒಬ್ಬರು ಆಯ್ಕೆಯಾಗಿದ್ದಾರೆ. ಅದೇ ರೀತಿ ಅರಸೀಕೆರೆ ನಗರಸಭೆಯಲ್ಲೂ ಬಿಜೆಪಿ ಸದಸ್ಯರು ಎಸ್.ಟಿ ಸಮುದಾಯದಿಂದ ಅಯ್ಕೆಯಾಗಿದ್ದಾರೆ.
ಈ ಎರಡೂ ನಗರಸಭೆಗಳಲ್ಲಿ ಜೆಡಿಎಸ್ ಬಹುಮತ ಹೊಂದಿದೆ. ಹೀಗಿದ್ದರೂ ಮೀಸಲಾತಿ ನಿಗಧಿಯಲ್ಲಿ ಅನ್ಯಾಯ ಮಾಡಲಾಗಿದೆ. ಬಿಜೆಪಿ ಶಾಸಕ ಪ್ರೀತಂಗೌಡ, ಸಿಎಂ ಯಡಿಯೂರಪ್ಪ ಆಪ್ತ ಸಂತೋಷ್ ಕೈವಾಡದಿಂದ ಈ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ ಎಂದು ಜೆಡಿಎಸ್ ಆರೋಪಿಸಿದೆ.
ಹಾಸನ ನಗರಸಭೆ ಬಲಾಬಲ: ಒಟ್ಟು 35
ಜೆಡಿಎಸ್-17
ಕಾಂಗ್ರೆಸ್-02
ಬಿಜೆಪಿ-13
ಪಕ್ಷೇತರರರು-03
35 ಸದಸ್ಯಬಲ ಹೊಂದಿರುವ ಹಾಸನ ನಗರಸಭೆಯಲ್ಲಿ ಜೆಡಿಎಸ್ 17 ಸದಸ್ಯ ಬಲ ಹೊಂದಿದೆ. ಹೀಗಾಗಿ ಅಧ್ಯಕ್ಷ ಗಾದಿ ಜೆಡಿಎಸ್‍ಗೆ ದಕ್ಕಬೇಕು. ಆದರೆ, ಈ ಬಾರಿ ಮೀಸಲಾತಿ ಎಸ್.ಟಿಗೆ ಮೀಸಲಿಡಲಾಗಿದೆ. ಬಿಜೆಪಿಯ ಮೋಹನ್‍ಕುಮಾರ್ ಹೊರತುಪಡಿಸಿ ಬೇರೆ ಯಾವ ಪಕ್ಷದಿಂದಲೂ ಎಸ್.ಟಿ ಪಂಗಡದಿಂದ ಆಯ್ಕೆಯಾಗಿಲ್ಲ. ಹೀಗಾಗಿ ಅನಾಯಾಸವಾಗಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿದೆ.
ಅರಸೀಕೆರೆ ನಗರಸಭೆ ಬಲಾಬಲ: ಒಟ್ಟು 31
ಜೆಡಿಎಸ್-21
ಕಾಂಗ್ರೆಸ್-01
ಬಿಜೆಪಿ-05
ಪಕ್ಷೇತರರು-05
ಅರಸೀಕೆರೆ ನಗರಸಭೆಯಲ್ಲೂ ಬಿಜೆಪಿ ಕೇವಲ 5 ಸದಸ್ಯಬಲ ಹೊಂದಿದೆ. ಜೆಡಿಎಸ್ ಅತಿಹೆಚ್ಚು 21 ಸ್ಥಾನದ ಬಲಾಬಲ ಹೊಂದಿದ್ದರೂ ಹೊಸ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಜೆಡಿಎಸ್ ಕೈತಪ್ಪಿದೆ. ಇಲ್ಲೂ ಕೂಡ ಎಸ್.ಟಿ ಸಮುದಾಯದ ಗಿರೀಶ್ ಒಬ್ಬರೇ ಎಸ್.ಟಿ ಸಮುದಾಯದಿಂದ ಆಯ್ಕೆಯಾಗಿದ್ದಾರೆ. ಬಹುಮತ ಇಲ್ಲದಿದ್ದರೂ ಮೀಸಲಾತಿಯಲ್ಲಿ ಗೋಲ್‍ಮಾಲ್ ಮಾಡಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆರೋಪವಾಗಿದೆ.
ಮೀಸಲಾತಿ ತಾರತಮ್ಯ ನ್ಯಾಯ ದೇವತೆಗೆ ಅವಮಾನ
ಹಾಸನ ನಗರಸಭೆಯಲ್ಲಿ ಜೆಡಿಎಸ್‍ಗೆ ಬಹುಮತ ಇದ್ದರೂ ಮೀಸಲು ನಿಗಧಿಯಲ್ಲಿ ಅನ್ಯಾಯ ಮಾಡಲಾಗಿದೆ. ಇದು ನ್ಯಾಯ ದೇವತೆಗೆ ಮಾಡಿದ ಅನ್ಯಾಯ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.
ಜೆಡಿಎಸ್ ಬೆಳವಣಿಗೆ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಭಯವಿದೆ. ಈ ಹಿಂದೆ ಕಾಂಗ್ರೆಸ್ ಜಿಲ್ಲೆಯಲ್ಲಿ ಮಾಡಿದ ತಾರತಮ್ಯವನ್ನು ಈಗ ಬಿಜೆಪಿಯವರು ಮಾಡಿದ್ದಾರೆ, ಎಸ್.ಟಿಗೆ ಮೀಸಲಾತಿ ಇರುವುದು ಕೊಪ್ಪಳ ಹಾಗೂ ಹರಿಹರಕ್ಕೆ. ಇದನ್ನು ಅಡ್ವೋಕೇಟ್ ಜನರಲ್ ಹೈಕೋರ್ಟಿಗೆ ನೀಡಿದ್ದರು. ಆದರೂ ರಾತ್ರೋರಾತ್ರಿ ಬದಲಾವಣೆ ಮಾಡಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದು, ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.