ರಾಜ್ಯ ವಿಧಾನಸಭೆಯಲ್ಲಿ ಭಾರೀ ಗದ್ದಲ ಮತ್ತು ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ‘ದ್ವೇಷ ಭಾಷಣ–ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025’ ಅನ್ನು ಸರ್ಕಾರ ಅಂಗೀಕರಿಸಿದೆ. ಸದನದಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.
ವಿಪಕ್ಷ ಸದಸ್ಯರು ಮಸೂದೆ ಪ್ರತಿಗಳನ್ನು ಹರಿದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲಕಾಲ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಕಲಾಪವೂ ಅಸ್ತವ್ಯಸ್ತಗೊಂಡಿತು.
ಆದರೆ ಗದ್ದಲದ ನಡುವೆಯೇ ಸರ್ಕಾರ ತನ್ನ ಬಹುಮತದ ಬಲದೊಂದಿಗೆ ಮಸೂದೆಯನ್ನು ಪಾಸ್ ಮಾಡಿಸಿತು. ಸರ್ಕಾರದ ವಾದದಂತೆ, ಈ ವಿಧೇಯಕವು ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳಿಗೆ ತಡೆ ಹಾಕುವ ಉದ್ದೇಶ ಹೊಂದಿದ್ದು, ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಯನ್ನು ಕಾಪಾಡಲು ಅಗತ್ಯವಾಗಿದೆ.
ಈ ಮಸೂದೆ ಜಾರಿಗೆ ಬಂದ ಬಳಿಕ, ಇನ್ಮುಂದೆ ಸಾಮಾಜಿಕ, ರಾಜಕೀಯ ಹಾಗೂ ಸಾರ್ವಜನಿಕ ಸಭೆಗಳಲ್ಲಿ ದ್ವೇಷ ಹರಡುವ ಭಾಷಣಗಳಿಗೆ ಕಠಿಣ ಕ್ರಮ ಕೈಗೊಳ್ಳಲು ಕಾನೂನು ಆಧಾರ ದೊರೆಯಲಿದೆ. ದ್ವೇಷ ಭಾಷಣ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದು, ಶಿಕ್ಷೆ ವಿಧಿಸುವುದು ಸಾಧ್ಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ, ಈ ವಿಧೇಯಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಜಾರಿ ಮತ್ತು ಪರಿಣಾಮಗಳ ಬಗ್ಗೆ ಭಾರೀ ರಾಜಕೀಯ ಹೋರಾಟ ನಡೆಯುವ ಸಾಧ್ಯತೆ ಇದೆ.








