ಭಾರತದ ಪ್ರಥಮ ಸೂರ್ಯ ಅಧ್ಯಯನ ಯೋಜನೆಗೆ ಇಸ್ರೋ ಸಿದ್ಧವಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಆದಿತ್ಯ – ಎಲ್1 ಉಪಗ್ರಹ ಶನಿವಾರ ಉಡಾವಣೆಯಾಗಲಿದೆ. ಆದಿತ್ಯ ಎಲ್ 1 ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟ್ ನಭಕ್ಕೆ ಹಾರಲಿದೆ.
ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆ ಇದಾಗಿದ್ದು, ಈ ಅಧ್ಯಯನದಿಂದ ಸೂರ್ಯನ ಭೂತ, ಭವಿಷ್ಯ ಹಾಗೂ ವರ್ತಮಾನಗಳ ಕುರಿತು ಮಹತ್ವದ ಮಾಹಿತಿ ಸಿಗಲಿವೆ. ಹೀಗಾಗಿ ಆದಿತ್ಯ ಎಲ್ 1 ಉಡಾವಣೆಗೆ ಕ್ಷಣಗಣನೆ ಇಂದಿನಿಂದ ಆರಂಭವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿ ಭೂಮಿಯ ಗುರುತ್ವಾಕರ್ಷಣೆ ಹಾಗೂ ಸೂರ್ಯನ ಗುರುತ್ವಾಕರ್ಷಣೆ ಸಮ ಪ್ರಮಾಣದಲ್ಲಿ ಇರಲಿದೆ. ಈ ಪಾಯಿಂಟ್ ನಲ್ಲಿ ಉಪಗ್ರಹ ನಿಂತರೆ ನಿರಂತರವಾಗಿ ಸೂರ್ಯನ ಅಧ್ಯಯನ ನಡೆಸಲು ಸಹಕಾರಿ ಆಗಲಿದೆ. ಬೆಂಗಳೂರಿನ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಗೊಳ್ಳಲಿರುವ ಸೂರ್ಯನ ವೀಕ್ಷಣೆಗಾಗಿ ಇದು ಮೊದಲ ಮೀಸಲಾದ ಭಾರತೀಯ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ.