ಬೆಂಗಳೂರು : ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್ ನಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 45 ಮತಗಳ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷ ಸುಲಭವಾಗಿ ಒಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡಬಹುದಾಗಿದೆ. ಉಳಿದಿರುವ ಹೆಚ್ಚುವರಿ ಮತಗಳನ್ನು ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದರೆ ಅವರಿಗೆ ಮತ ನೀಡಲು ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಒಲವು ವ್ಯಕ್ತವಾಗಿದೆ.
ಜೆಡಿಎಸ್ ವಿಧಾನಸಭೆಯಲ್ಲಿ 34 ಶಾಸಕರನ್ನು ಹೊಂದಿದ್ದು, ರಾಜ್ಯಸಭೆ ಗೆಲ್ಲಲು ಆ ಪಕ್ಷಕ್ಕೆ ಇನ್ನೂ 10 ಮತಗಳ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷದ ಜತೆ ಹೊಂದಾಣಿಕೆ ಆದರೆ ಕಾಂಗ್ರೆಸ್ ನೆರವಿನೊಂದಿಗೆ ಜೆಡಿಎಸ್ ಪಕ್ಷದಿಂದ ಒಬ್ಬರು ರಾಜ್ಯಸಭೆಗೆ ಆಯ್ಕೆಯಾಗಬಹುದಾಗಿದೆ. ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಜತೆ ಚರ್ಚಿಸಲು ಮಾಜಿ ಪ್ರಧಾನಿ ದೇವೇಗೌಡರು ಸದ್ಯದಲ್ಲಿಯೇ ದೆಹಲಿಗೆ ತೆರಳಲಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣೆಯಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕಿಳಿಸಲು ಮತ್ತು ಜೆಡಿಎಸ್ ನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ ಮಾಡಬೇಕೆನ್ನುವುದು ಸಹ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಒಲವು ಆಗಿದೆ. ರಾಜ್ಯಸಭೆಯಲ್ಲಿ ಖರ್ಗೆ, ದೇವೇಗೌಡರಂತಹ ನಾಯಕರಿದ್ದರೆ ಪ್ರಧಾನಿ ಮೋದಿ ಸರಕಾರದ ವಿರುದ್ಧ ಗಟ್ಟಿಯಾಗಿ ಮಾತನಾಡಬಹುದು ಎನ್ನುವುದು ಇವರಿಬ್ಬರ ಆಯ್ಕೆ ಹಿಂದಿರುವ ಕಾಂಗ್ರೆಸ್ ಲೆಕ್ಕಾಚಾರವಾಗಿದೆ.