ಸಿದ್ದರಾಮಯ್ಯ ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ: ಹೆಚ್.ಡಿ.ಕೆ
ಬೆಂಗಳೂರು : ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಆ ಪಾಪಕ್ಕೆ ಪ್ರತಿಯಾಗಿ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ? ಕಳ್ಳಮಾಲು ಹ್ಯೂಬ್ಲೆಟ್ ವಾಚಿನ ಬಗ್ಗೆ ವಾಕರಿಕೆ ಬರುವಷ್ಟು ಹೇಸಿಗೆ ಕಥೆಗಳೇ ಇವೆ. ಇವೆರಡೂ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ, ಯಾಕಯ್ಯಾ? ಎಂದು ಮಾಜಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಅಲ್ಲದೇ ಈಶ್ವರಪ್ಪ ಬಗ್ಗೆ ಮಾತನಾಡಿ, ಅಭ್ಯಂತರವಿಲ್ಲ. ಡಿವೈಎಸ್ಪಿ ಗಣಪತಿ ಬಗ್ಗೆಯೂ ಹೇಳಿ, ಬೇಜಾರಿಲ್ಲ. ಆದರೆ; ಕಲ್ಲಪ್ಪ ಹಂಡೀಭಾಗ್ ಬಗ್ಗೆ ಮಾತನಾಡಿದರೆ ನಿಮ್ಮ ಜಾಣ ಮೌನವೇಕೆ? ಆ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿದೇ ವಿಧಿಯೇ ಇಲ್ಲ. ಪ್ರಾಮಾಣಿಕ ಅಧಿಕಾರಿಯ ದುರಂತ ಅಂತ್ಯ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ನಿಮ್ಮ 5 ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈಷುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳು ಮಾಡಿದಿರಿ. ಮರೆತುಬಿಟ್ಟಿರಾ ಸುಳ್ಳುರಾಮಯ್ಯ? ಎಂದು ಪ್ರಶ್ನಿಸಿದ್ದಾರೆ.
ಹಾಗೇ ಮಂಡ್ಯದಲ್ಲಿ ಏಳೂ ಸೀಟು ಸಿಗಲಿಲ್ಲ ಎಂದು ಜನರ ಮುಂದೆ ಹಲುಬುತ್ತೀರಿ. 200 ಅನ್ನದಾತರ ಜೀವಕ್ಕೆ ಎರವಾಗಿ, ಇಡೀ ಜಿಲ್ಲೆಯಲ್ಲಿ ಮರಣಮೃದಂಗ ಭಾರಿಸಿದ ನಿಮ್ಮ ರೈತವಿರೋಧಿ ನೀತಿಗಳು ಕಸಿದ ಜೀವಗಳ ಲೆಕ್ಕವೆಲ್ಲಾ ಚುಕ್ತಾ ಆಗುವ ಕಾಲ ಬಂದಿದೆ. ಜೀವ ತೆಗೆಯುವ ಜವರಾಯನ ಅವತಾರವೇ ನೀವಾಗಿರುವಾಗ ನಮ್ಮ ಕಣ್ಣೀರನ್ನು ಹಂಗಿಸುತ್ತೀರಿ ಎಂದು ಅಸಮಾಧಾನ ಹೊರಹಾಕಿದರು.
ಮುಂದುವರೆದು ಆಪರೇಷನ್ ಕಮಲದಿಂದ ನಿಮ್ಮ ಜೇಬು ಸೇರಿದ ಆಕರ್ಷಕ ಅಂಕಿಯ ಹಣದ ಅಸಲೀಯೆತ್ತು ನನಗೂ ಗೊತ್ತು! ನೀವು ರಾಜ್ಯ ಕಂಡ ಗ್ರೇಟ್ ಹಣಕಾಸು ಮಂತ್ರಿ, ಪ್ಲಸ್ಸೂ ಮೈನಸ್ಸಿನ ಪ್ರವೀಣ, ಪರ್ಸಂಟೇಜ್ ಪಿತಾಮಹನಷ್ಟೇ ಅಲ್ಲ.. ಅನೈತಿಕ ರಾಜಕಾರಣದ ಅಸಲಿ ಅಪ್ಪ. ಈಗ ಹೇಳಿ? ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ ಯಾರು? ಎಂದರು.
https://twitter.com/hd_kumaraswamy/status/1516270084934680580
ಬಿಜೆಪಿ ಬಗ್ಗೆ ನಿಮ್ಮ ವಾದಸರಣಿ ಅದ್ಭುತಃ!! ನಿಮ್ಮ ಪಾಲಿಗೆ ಆ ಪಕ್ಷ ಹೊರಗಷ್ಟೇ ಕೋಮುವಾದಿ! ಹಣದ ವಿಷಯ ಎಂದಾಗ ಒಳಗೆಲ್ಲಾ ಅನುಕೂಲವಾದಿ !! ಸ್ವಯಂ ಘೋಷಿತ ಸಂವಿಧಾನ ತಜ್ಞ, ಸ್ವಯಂ ಘೋಷಿತ ಸತ್ಯ ಹರಿಶ್ಚಂದ್ರ, ಈಗ ಹೇಳಿ? ಕಾಂಗ್ರೆಸ್ ಕಚೇರಿಯಲ್ಲೇ ಕಾರ್ಯಕರ್ತರ ಸಾಕ್ಷಿಯಾಗಿ “ಕಾಂಗ್ರೆಸ್ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯಬೇಕು” ಎಂದು ನೀವು ಮಾಡಿದ ಭೀಷಣ ಭಾಷಣ ಯಾರಿಗಯ್ಯಾ ಭೂಷಣ? ಮಾತೃಪಕ್ಷವನ್ನೇ ಮುಗಿಸಲು ಹೊರಟಿರುವ ನೀವು ಯಾವ ಟೀಮು? ಎಂದು ಸಿದ್ದರಾಮಯ್ಯ ಅವರಿಗೆ ಹೆಚ್.ಡಿ.ಕೆ ಕೇಳಿದರು.
ಕೊನೆಗೆ 4 ಪ್ರಶ್ನೆ! 1.ಆಪರೇಷನ್ ಕಮಲಕ್ಕೆ ಸಹಕರಿಸಿದ್ದಕ್ಕೆ ಸಿಕ್ಕ ಪ್ರತಿಫಲವೆಷ್ಟು? 2.ಆ ಪಾಪದ ಹಣವನ್ನು ಏನು ಮಾಡಿದಿರಿ? 3.ಹ್ಯೂಬ್ಲೆಟ್ ವಾಚಿನ ʼಸಿದ್ದರಹಸ್ಯʼವೇನು? 4.ಅರ್ಕಾವತಿ ರೀಡೂ ಬಗ್ಗೆ ಮೌನವೇಕೆ? ಧೈರ್ಯವಿದ್ದರೆ ಉತ್ತರಿಸಿ, ವಿಷಯಾಂತರ ಬೇಡ ಎಂದು ಹೇಳಿದರು.








