ಸಮಿಶ್ರ ಸರಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಕಾರಣ : ಹೆಚ್.ಡಿ.ಕೆ
ಹಾಸನ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಮಧ್ಯೆ ಟ್ವೀಟ್ ವಾಕ್ಸಮರ ಮುಂದುವರೆದಿದ್ದು, ಮೊದಲು ನಾನು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದ 4 ಪ್ರಶ್ನೆಗಳಗೆ ಸಿದ್ಧರಾಮಯ್ಯ ಉತ್ತರಿಸಲಿ ಎಂದು ಹೆಚ್.ಡಿ.ಕೆ ಗರಂ ಆಗಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಆಣೆ ಮಾಡಿ. ಹೆಚ್.ಡಿ. ದೇವಗೌಡರ ಮೇಲೆ ಆಣೆ ಮಾಡಲು ಕುಮಾರಸ್ವಾಮಿ ಸಿದ್ಧರಿದ್ದಾರಾ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲೆ ಪ್ರತಿಕ್ರಿಯಿಸಿ ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಸ್ವಲ್ಪ ಉಸಿರಾಡುತ್ತಿದೆ ಎಂದರು.
ಅಲ್ಲದೇ ಇವರ ಪಕ್ಷದವರೇ ಹೋಗಿ ಡಿ.ಜೆ.ಹಳ್ಳಿಯಲ್ಲಿ ಬೆಂಕಿ ಹಚ್ಚಿದವರು. ಈಗ ಹುಬ್ಬಳ್ಳಿಯಲ್ಲಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಇಂತಹವರು ದೇಶದಲ್ಲಿ ಜಾತ್ಯಾತೀತ ವಾದವನ್ನು ಉಳಿಸುತ್ತಾರಾ? ದೇವೆಗೌಡರ ಮೇಲೆ ಆಣೆ ಮಾಡುವುದಕ್ಕೆ ಹೇಳಲು ನೀನು ಯಾವೂರು ದಾಸಯ್ಯ, ಸಿದ್ದರಾಮಯ್ಯ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಕಿಡಿಕಾರಿದ್ದಾರೆ.
ಇನ್ನೂ ಪದೇಪದೇ ಜೆಡಿಎಸ್ ಅನ್ನು ಬಿಜೆಪಿ ಬಿಟೀಂ ಎನ್ನುತ್ತೀರಿ. ರಾಜ್ಯದಲ್ಲಿ ಈಗ ಬಿಜೆಪಿ ಸರಕಾರ ಯಾರಿಂದ ಅಧಿಕಾರಕ್ಕೆ ಬಂದಿದೆ. ಸಂಪುಟ ವಿಸ್ತರಣೆಯ ವೇಳೆ ಟವಲ್ ಕೊಡವಿ ಎದ್ದಿದ್ದರು. ಇಬ್ಬರು ಪಕ್ಷೇತರರನ್ನು ಮಂತ್ರಿ ಮಾಡಿಸಿ ಸರಕಾರ ಕಿತ್ತರು. ಸಮಿಶ್ರ ಸರಕಾರ ಬೀಳುವುದಕ್ಕೆ ಇವರೇ ಮೂಲ ಕಾರಣ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕೆ ದೂರಿದ್ದಾರೆ.









