ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಂಡನೀಯ, ಭಾರತೀಯದ ನಾವು ನಮ್ಮ ದೇಶಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ವೇದಿಕೆ ಮೇಲೆ ಆಕೆ ಉದ್ದೇಶ ಪೂರ್ವಕವಾಗಿ ಹೇಳಿದ್ದಾಳೋ ಅಥವಾ ಪ್ರಚಾರಕ್ಕಾಗಿ ಹೇಳಿದ್ದಾಳೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಾದ ಇಮ್ರಾನ್ ಕಾರ್ಯಕ್ರಮ ಸಂಘಟನೆಯ ಹೊಣೆ ಹೊತ್ತಿದ್ದರು. ಅಮೂಲ್ಯ ಘೋಷಣೆ ಕೂಗಿದ ಕೂಡಲೆ ಆಕೆ ಬಳಿ ತೆರಳಿ ಮೈಕ್ ಕಸಿದುಕೊಂಡಿದ್ದಾರೆ. ಇದರಿಂದ ಸಂಘಟಕರಿಂದ ಉದ್ದೇಶ ಪೂರ್ವಕವಾಗಿ ಪ್ರಯತ್ನ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ಬಗ್ಗೆ ಅಪಪ್ರಚಾರ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿಕೆ, ಬಿಜೆಪಿ ಇಂತಹ ಪ್ರಯತ್ನಗಳಿಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಹೊರಟಿದೆ. ಬಿಜೆಪಿಯವರಿಂದ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ, ಯಾರೋ ಒಬ್ಬರು ಘೋಷಣೆ ಕೂಗಿದ ಮಾತ್ರಕ್ಕೆ ಅದರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.