ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಬಡವರಿಗೆ ಸಾಕಷ್ಟು ತೊಂದರೆ ಆಗುತ್ತಿದ್ದು, ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಹಾಗಾಗಿ ಸಮಸ್ಯೆಗೆ ಸಿಲುಕಿದವರಿಗೆ ಆಹಾರ ಪೂರೈಸಲು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ‘ಹೆಚ್ ಡಿಕೆ ಜನತಾ ದಾಸೋಹ’ ಆರಂಭಿಸಿದ್ದಾರೆ.
ಲಾಕ್ ಡೌನ್ ನಿಂದ ತೊಂದರೆಯಲ್ಲಿರುವ ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರು, ದುರ್ಬಲರಿಗೆ ನಿತ್ಯ ಆಹಾರ ಪೂರೈಸುವುದು ‘ಹೆಚ್‌ಡಿಕೆ ಜನತಾ ದಾಸೋಹ’ದ ಗುರಿಯಾಗಿದೆ. ಇದರ ಅಡಿಯಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪ್ರತಿ ಅವಧಿಯಲ್ಲೂ ಸಾವಿರ ಮಂದಿಗೆ ಭೋಜನೆ ನೀಡಲಾಗುತ್ತದೆ.
ಸದ್ಯ ರಾಮನಗರ, ಚನ್ನಪಟ್ಟಣ ತಾಲೂಕಿನಲ್ಲಿ ದಾಸೋಹವನ್ನು ಆರಂಭಿಸಲಾಗಿದ್ದು, ತಮ್ಮ ಈ ನಡೆಯನ್ನೇ ಪಕ್ಷದ ಶಾಸಕರು, ಹಿಂದಿನ ಚುನಾವಣೆಯ ಪರಾಜಿತರು, ಮುಖಂಡರು ತಮ್ಮ ಕ್ಷೇತ್ರಗಳಲ್ಲಿ ಆರಂಭಿಸಬೇಕು ಎಂದು ಕುಮಾರಸ್ವಾಮಿ ಅವರು ಸಂದೇಶ ರವಾನಿಸಿದ್ದಾರೆ. ಇದಿಷ್ಟೇ ಅಲ್ಲದೇ, ರಾಮನಗರ ಜಿಲ್ಲೆಯ ಸಾರ್ವಜನಿಕರಿಗೆ ದಿನಸಿ ಪೂರೈಸಲೂ ಕುಮಾರಸ್ವಾಮಿ ಅವರು ನಿರ್ಧರಿಸಿದ್ದು, ಇದಕ್ಕಾಗಿ ಮಾಹಿತಿ ಸಂಗ್ರಹ ಕಾರ್ಯ ಆರಂಭವಾಗಿದೆ.
ಇನ್ನು ಕೊರೊನಾ ಸೋಂಕಿಗೆ ಇದುವರೆಗೂ ದೇಶದಲ್ಲಿ 1400ಕ್ಕೂ ಹೆಚ್ಚು ಮಂದಿ ತುತ್ತಾಗಿದ್ದು, 38 ಜನರು ಬಲಿಯಾಗಿದ್ದಾರೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ.








