Dr K Sudhakar | ನಾನೊಬ್ಬ ಸೆಕ್ಯುಲರ್ ರಾಜಕಾರಣಿ
ಬೆಂಗಳೂರು : ಧರ್ಮ, ಭಾಷೆ ಮೊದಲಾದ ಭಿನ್ನತೆಗಳ ನಡುವೆಯೂ ಏಕತೆ ಇರುವುದು ಅಗತ್ಯ. ನನಗೆ ಯಾವ ಧರ್ಮವನ್ನೂ ಗುರಿಯಾಗಿಸಲು ಇಷ್ಟವಿಲ್ಲ.
ನಾನೊಬ್ಬ ಸೆಕ್ಯುಲರ್ ರಾಜಕಾರಣಿ. ಪ್ರತಿಯೊಬ್ಬರಿಗೂ ಅವರ ನಂಬಿಕೆಯನ್ನು ಆಚರಿಸಲು ಸಂವಿಧಾನದಲ್ಲಿ ಅವಕಾಶವಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾಕರ್, ಭಯೋತ್ಪಾದಕರಿಗೆ ಜನರಲ್ಲಿ ಭಯ ಹುಟ್ಟಿಸಲು ಮಾತ್ರ ಸಾಧ್ಯವಾಗುತ್ತದೆ.
ಭಯ ಹುಟ್ಟಿಸಲು ಅವರು ಜನರ ಮುಗ್ಧತೆಯನ್ನು ಮುಖ್ಯ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ವಿದ್ಯಾರ್ಥಿನಿ ಮುಸ್ಕಾನ್ ಮುಗ್ಧಳಾಗಿದ್ದಾಳೆ.
ಆದರೆ ನಾವೆಲ್ಲರೂ ಕಾನೂನು ಪಾಲನೆ ಮಾಡಬೇಕು. ನೆಲದ ಕಾನೂನನ್ನು ಗೌರವಿಸಬೇಕು. ಜೀವನದಲ್ಲಿ ಶಿಸ್ತು ಮುಖ್ಯವಾಗಿದ್ದು, ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗೆ ಗೌರವ ಕೊಡಬೇಕು.
ಶಾಲೆಯಲ್ಲಿ ಧರ್ಮವನ್ನು ಬದಿಗಿಟ್ಟು ಶಿಕ್ಷಣಕ್ಕೆ ಗೌರವ ಕೊಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲದರಲ್ಲೂ ಒಗ್ಗಟ್ಟಿರಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಹಿಜಾಬ್ ಬಗ್ಗೆ ಮಾತನಾಡಿ, ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಕಾನೂನು ಎಲ್ಲರಿಗೂ ಒಂದೇ. ಎಲ್ಲಾ ನಾಗರಿಕರು ಕಾನೂನು ಪಾಲಿಸಬೇಕು.
ಯಾವುದೇ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ ಕೆಲ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ ಎಂದರು.
ಅಲ್ ಕೈದಾ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನಾ ಸಂಘಟನೆ. ಈ ಸಂಘಟನೆಯ ಹೇಳಿಕೆಯನ್ನು ಭಾರತೀಯರು ಒಕ್ಕೊರಲಿನಿಂದ ಖಂಡಿಸುತ್ತದೆ.
ಅವರ್ಯಾರೋ ಹೇಳಿಕೆ ನೀಡಿದರೆ ನಮಗೆ ಅದು ಮುಖ್ಯವಾಗುವುದಿಲ್ಲ. ಆ ಸಂಘಟನೆಯನ್ನು ಭಾರತ ಎಲ್ಲ ರೀತಿಯಿಂದಲೂ ಬಹಿಷ್ಕಾರ ಹಾಕಿದೆ.
ಅವರ ಹೇಳಿಕೆ ಬಗ್ಗೆ ಮಾತನಾಡುವುದೇ ಒಂದು ಅಪರಾಧ. ಅಮಾಯಕ ಜನರನ್ನು ಬಲಿ ಪಡೆಯುವ, ಅತ್ಯಂತ ಕೌರ್ಯ ಮೆರೆಯುವ ಸಂಘಟನೆಯದು. ಅವರ ಹೇಳಿಕೆ ಬಗ್ಗೆ ಏಕೆ ಮಾತನಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಪ್ರಶ್ನೆ ಮಾಡಿದರು.