ಐಪಿಎಲ್ ತಂಡ ಖರೀದಿಗೆ ಭಾರಿ ಪೈಪೋಟಿ
14 ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಬಿಸಿಸಿಐ 15ನೇ ಆವೃತ್ತಿಗೆ ಬ್ಲೂ ಪ್ರಿಂಟ್ ರೆಡಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಮುಂದಿನ ಬಾರಿಯ ಐಪಿಎಲ್ ನಲ್ಲಿ ಹೊಸ ತಂಡಗಳ ಸೇರ್ಪಡೆಯಾಗಲಿದೆ. ಇದು ಐಪಿಎಲ್ ಕ್ರೇಜ್ ಇನ್ನಷ್ಟು ಹೆಚ್ಚಿಸಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಐಪಿಎಲ್ 2022ರ ಫ್ರಾಂಚೈಸಿಗಳ ರೇಸ್ ನಲ್ಲಿ ಗುಜರಾತ್ ನ ಅಹಮದಾಬಾದ್ ಮತ್ತು ಉತ್ತರ ಪ್ರದೇಶದ ಲಖನೌ ನಗರಗಳು ಮುಂಚೂಣಿಯಲ್ಲಿವೆ. ಈ ಎರಡು ಫ್ರಾಂಚೈಸಿ ಪಡೆಯಲು ದೇಶದ ಘಟಾನುಘಟಿ ಸಂಸ್ಥೆಗಳು ತೀವ್ರ ಪೈಪೋಟಿ ನಡೆಸುತ್ತಿವೆ.
ಇದೇ ತಿಂಗಳಿನಲ್ಲಿ ಹೊಸ ತಂಡಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಹರಾಜಿನಲ್ಲಿ ಬಾಲಿವುಡ್ ನ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ದಂಪತಿ ಭಾಗಿಯಾಗಲಿದೆಯಂತೆ. ಇನ್ನು ವಿಶ್ವದ ಅತ್ಯಂತ ಜನಪ್ರಿಯ ಫುಟ್ ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಐಪಿಎಲ್ ತಂಡವನ್ನು ಖರೀದಿಸಲಿದೆ ಎಂದು ವರದಿಯಾಗಿದೆ.
ಇದಲ್ಲದೆ ಐಪಿಎಲ್ ತಂಡಗಳ ಖರೀದಿಗಾಗಿ ಅದಾನಿ ಗ್ರೂಪ್, ಟೊರೆಂಟೋ ಫಾರ್ಮಾ, ಅರೊಬಿಂದೋ ಫಾರ್ಮಾ, ಆರ್‍ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್, ಉದ್ಯಮಿ ರೋನಿ ಸ್ಕ್ರೂವಾಲಾ ಸೇರಿದಂತೆ ಹಲವು ಕಂಪನಿಗಳು ಬಿಡ್ ದಾಖಲಾತಿಯನ್ನು ಖರೀದಿಸಿವೆ ಎಂದು ತಿಳಿದು ಬಂದಿದೆ.