ಜಪಾನ್ ನಲ್ಲಿ ಭೀಕರ ಪ್ರವಾಹ-50ಕ್ಕೂ ಹೆಚ್ಚು ಮಂದಿ ಸಾವು
ಫುಕುಯೋಕಾ, ಜುಲೈ 7: ಜಪಾನ್ ಕ್ಯುಶು ಪ್ರದೇಶದಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿಯುತ್ತಿದ್ದು, 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಓಟಾ ಪ್ರಿಫೆಕ್ಚರ್‌ನ ಚಿಕುಗೊ ನದಿ ಉಕ್ಕಿ ಹರಿಯುತ್ತಿದ್ದು ಕುಮಮೊಟ ಮತ್ತು ಪುಕೌಕಾ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕ್ಯುಶು ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದ ಅನೇಕರು ಗಾಯಗೊಂಡಿದ್ದು, ಪ್ರಕೃತಿ ವಿಕೋಪದಲ್ಲಿ 12ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಕುಮಾಮೊಟೊ ಪ್ರಾಂತ್ಯದಲ್ಲಿ, ಕನಿಷ್ಠ 51 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಫುಕುಯೋಕಾ ಪ್ರಿಫೆಕ್ಚರ್‌ನ ಓಮುಟಾದಲ್ಲಿರುವ 87 ವರ್ಷದ ಮಹಿಳೆ ಸೋಮವಾರ ರಾತ್ರಿ ತನ್ನ ಮುಳುಗಿದ ಮನೆಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.
ಓಮುಟಾದಲ್ಲಿ ಪ್ರವಾಹದ ನೀರು ಹೆಚ್ಚಾದ ಹಿನ್ನಲೆಯಲ್ಲಿ ಸುಮಾರು 200 ಜನರನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಗಳಿಗಾಗಿ ಸ್ವರಕ್ಷಣಾ ಪಡೆಗಳನ್ನು ರವಾನಿಸಲು ಪ್ರಿಫೆಕ್ಚರಲ್ ಸರ್ಕಾರ ಕೇಂದ್ರ ಸರ್ಕಾರವನ್ನು ಕೇಳಿದೆ.
ನಾವು ಸಮಯದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಕುಮಾಮೊಟೊ ಅಧಿಕಾರಿ ಯುಟಾರೊ ಹಮಾಸಾಕಿ ಮಂಗಳವಾರ ಮುಂಜಾನೆ ಹೇಳಿದ್ದಾರೆ
ಕಾರ್ಯಾಚರಣೆಯನ್ನು ಕೊನೆಗೊಳಿಸಲು ನಾವು ಯಾವುದೇ ಗಡುವನ್ನು ಅಥವಾ ಸಮಯವನ್ನು ನಿಗದಿಪಡಿಸಿಲ್ಲ, ಆದರೆ ನಾವು ನಮ್ಮ ಕಾರ್ಯಚರಣೆಯ ವೇಗವನ್ನು ಹೆಚ್ಚಿಸಬೇಕಿದ್ದು, ನಾವು ಕೊನೆಯವರೆಗೂ ಬಿಟ್ಟುಕೊಡುವುದಿಲ್ಲ ಎಂದು ಹಮಾಸಾಕಿ ಪ್ರತಿಜ್ಞೆ ಮಾಡಿದರು.
ಜನರನ್ನು ರಕ್ಷಿಸಲು ಪೊಲೀಸ್, ಅಗ್ನಿಶಾಮಕ ದಳದವರು, ಕರಾವಳಿ ಕಾವಲುಗಾರರು ಮತ್ತು ಎಸ್‌ಡಿಎಫ್ ಸೇರಿದಂತೆ 40,000 ಕ್ಕೂ ಹೆಚ್ಚು ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.








