Heavy rain | ಅಪಾಯದ ಮಟ್ಟ ಮೀರಿದ ಕೃಷ್ಣಾ ನದಿ.. ಬೆಳಗಾವಿಯಲ್ಲಿ ಹೈ ಅಲರ್ಟ್
ಬೆಳಗಾವಿ : ಕೃಷ್ಣಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಿದ್ದು, ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಕಾಗವಾಡ, ಅಥಣಿ ತಾಲೂಕಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೇ ಹಲವು ಸೂಕ್ಷ್ಮ ಸ್ಥಳಗಳಿಗೆ ಎನ್ ಡಿ ಆರ್ ಎಪ್, ಎಸ್ ಡಿ ಆರ್ ಎಪ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೃಷ್ಣಾ ನದಿ ಅಪಾಯದ ಮಟ್ಟದ ಮೀರಿ ಹರಿಯುತ್ತಿದ್ದು, ನದಿ ತೀರದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಚಿಕ್ಕೋಡಿಯ ಯಡೂರ ಗ್ರಾಮದಲ್ಲಿ ಪ್ರವಾಹ ವಾತಾವರಣ ನಿರ್ಮಾಣವಾಗಿದ್ದು, ಎನ್ ಡಿ ಆರ್ ಎಪ್ ಸಿಬ್ಬಂದಿ ಅಲ್ಲೇ ಬೀಡು ಬಿಟ್ಟಿದ್ದಾರೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ಉಪನದಿಗಳಾದ ದೂಧಗಂಗಾ, ವೇದಗಂಗಾ, ನದಿಗಳಲ್ಲೂ ಒಳಹರಿವು ಹೆಚ್ಚಿದೆ. ಹೀಗಾಗಿ ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಜಲಾವೃತಗೊಂಡಿವೆ.
ಹೀಗಾಗಿ ಜನರು ಸಂಚರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇತ್ತ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಚಿಕ್ಕೋಡಿ ವ್ಯಾಪ್ತಿಯ ಗಡಿಭಾಗದ ಬಂಗಾಲಿ ಬಾಬಾ ದೇವಸ್ಥಾನಕ್ಕೆ ನದಿ ನೀರು ನುಗ್ಗಿದೆ.