Heavy Rain | ಬೆಳಗಾವಿಯಲ್ಲಿ ಎರಡು ದಿನ ರಜೆ
ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿದೆ.
ಇದರಿಂದ ಜಿಲ್ಲೆಯಲ್ಲಿನ ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಭಾರಿ ಪ್ರಮಾಣದ ಹಾನಿಯುಂಟಾಗಿದೆ.
ಹೀಗಾಗಿ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ರಜೆ ಘೋಷಣೆ ಮಾಡಿದ್ದಾರೆ.
ಬೆಳಗಾವಿ ನಗರ, ಬೆಳಗಾವಿ ತಾಲೂಕು ಮತ್ತು ಖಾನಾಪುರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶುಕ್ರವಾರ ಮತ್ತು ನಾಳೆ ಶನಿವಾರ (ಜು.16) ರಜೆ ಘೋಷಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದ್ದು, ಕೃಷ್ಣಾ ನದಿಗೆ 1 ಲಕ್ಷ 20 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಸೇರುತ್ತಿದೆ.
ಜಿಲ್ಲೆಯಲ್ಲಿ ಸಪ್ತ ನದಿಗಳ ಒಳ ಹರಿವು ಹೆಚ್ಚಳದಿಂದ 11 ಸೇತುವೆಗಳು ಜಲಾವೃತಗೊಂಡಿವೆ.
ನಿಪ್ಪಾಣಿ 6, ಚಿಕ್ಕೋಡಿ 2, ಗೋಕಾಕ 1, ಖಾನಾಪುರ 2 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.
ಕಳೆದ 24 ಗಂಟೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 16 ಮಿಲಿಮೀಟರ್ ಮಳೆಯಾಗಿದೆ.