ಪಕ್ಕದ ರಾಜ್ಯ ಆಂಧ್ರದಲ್ಲಿ ಕಂಡು ಕೇಳರಿಯದ ಮಟ್ಟಿಗೆ ವ್ಯಾಪಕ ಮಳೆ ಸುರಿಯುತ್ತಿದೆ. ಸೆಪ್ಟೆಂಬರ್ ನಲ್ಲಿ ಕೂಡ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ವ್ಯಾಪಕ ಮಳೆಗೆ ರಾಜ್ಯ ಸಿಲುಕಿದಂತಾಗಿದೆ. ಸದ್ಯ ಇಲ್ಲಿಯವರೆಗೆ ಮಳೆಯಿಂದಾಗಿ 9 ಜನ ಸಾವನ್ನಪ್ಪಿದ್ದಾರೆ.
ವ್ಯಾಪಕ ಮಳೆ (Rain) ಆಗುತ್ತಿದ್ದು, ಬಹುತೇಕ ಕಡೆ ಪ್ರವಾಹ (Flood) ಸ್ಥಿತಿ ನಿರ್ಮಾಣವಾಗಿದೆ. ವಿಜಯವಾಡದಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 290 ಮಿ. ಮೀಟರ್ ಮಳೆ ಆಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 30ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೋದಾಡ ಬಳಿ ಪ್ರವಾಹದಲ್ಲಿ ಕೊಚ್ಚಿಬಂದ ಕಾರಿನಲ್ಲಿ ಯುವಕನ ಶವ ಪತ್ತೆಯಾಗಿದೆ. ಅನೇಕ ಕಡೆ ಕೊಚ್ಚಿ ಹೋಗುತ್ತಿದ್ದ ಜನರನ್ನು ರಕ್ಷಿಸಲಾಗಿದೆ.
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಭಾನುವಾರ ಹಿರಿಯ ಅಧಿಕಾರಿಗಳೊಂದಿಗೆ ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಿ, ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಐದು ಜಿಲ್ಲೆಗಳ 294 ಗ್ರಾಮಗಳಿಂದ 13,227 ಜನರನ್ನು ಸ್ಥಳಾಂತರಿಸಲಾಗಿದೆ. ಪೊಲೀಸರು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು 600 ಜನರನ್ನು ರಕ್ಷಿಸಿವೆ. ಕೇಂದ್ರ ಸರ್ಕಾರ ಕೂಡ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.