SA v AUS: 83 ಬಾಲ್‌ಗಳಲ್ಲಿ 174 ರನ್ ಬಾರಿಸಿ ಹಲವು ದಾಖಲೆ ಮುರಿದ ಹೆನ್ರಿಚ್ ಕ್ಲಾಸೆನ್
ಸೌತ್ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನ ಮುರಿದಿದ್ದಾರೆ. ಸೆಂಚುರಿಯನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ಲಾಸೆನ್, ಆಸ್ಟ್ರೇಲಿಯಾ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದರು. 83
ಬಾಲ್‌ಗಳಲ್ಲಿ 13 ಬೌಂಡರಿ ಹಾಗೂ 13 ಸಿಕ್ಸ್ ಮೂಲಕ 209.64ರ ಸ್ಟ್ರೈಕ್ ರೇಟ್‌ನಲ್ಲಿ 174 ರನ್‌ಗಳಿಸಿ ಅಬ್ಬರದ ಶತಕ ಸಿಡಿಸಿದರು. ತಮ್ಮ ಈ ಸ್ಪೋಟಕ ಆಟದೊಂದಿಗೆ ಕ್ಲಾಸೆನ್, ಏಕದಿನ ಕ್ರಿಕೆಟ್‌ನ ಹಲವು ದಾಖಲೆಗಳನ್ನ ಮುರಿದರು.
ಇನ್ನಿಂಗ್ಸ್ ಆರಂಭದಿಂದಲೇ ಆಸೀಸ್ ಬೌಲರ್‌ಗಳನ್ನ ದಂಡಿಸಿದ ಕ್ಲಾಸೆನ್, ಕೇವಲ 57 ಬಾಲ್‌ಗಳಲ್ಲಿ 100 ರನ್‌ಗಳಿಸಿದರು. ಆ ಮೂಲಕ ಆಸ್ಟ್ರೇಲಿಯ ತಂಡದ ವಿರುದ್ಧ ವೇಗದ ಶತಕದ ಸಿಡಿಸಿದ 2ನೇ ಆಟಗಾರ ಎನಿಸಿದರು. ಈ ಹಿಂದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, 52 ಬಾಲ್‌ಗಳಲ್ಲಿ ಶತಕ ದಾಖಲಿಸಿದ್ದರು. ಅಲ್ಲದೇ ಕ್ಲಾಸೆನ್ ಅವರ ಈ ಶತಕ ಏಕದಿನ ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾ ತಂಡದ ಆಟಗಾರ ಬಾರಿಸಿದ 5ನೇ ವೇಗದ ಶತಕವಾಗಿದೆ.
ಇನ್ನೂ ಕ್ಲಾಸೆನ್ ಬಾರಿಸಿದ 174 ರನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾ ತಂಡದ ಆಟಗಾರನೊಬ್ಬ ಗಳಿಸಿದ 8ನೇ ಗರಿಷ್ಠ ಸ್ಕೋರ್ ಆಗಿದೆ. ಮತ್ತೊಂದೆಡೆ ತಮ್ಮ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 13 ಸಿಕ್ಸರ್‌ಗಳನ್ನ ಬಾರಿಸಿದ ಹೆನ್ರಿಚ್ ಕ್ಲಾಸೆನ್ ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾ ಆಟಗಾರನೊಬ್ಬ ಸಿಡಿಸಿದ 2ನೇ ಗರಿಷ್ಠ ಸಿಕ್ಸರ್ ಎನಿಸಿದೆ.
ಸೌತ್ ಆಫ್ರಿಕಾಕ್ಕೆ ಜಯ:
ಹೆನ್ರಿಚ್ ಕ್ಲಾಸೆನ್(174) ಹಾಗೂ ಡೇವಿಡ್ ಮಿಲ್ಲರ್(82*) ಸ್ಪೋಟಕ ಬ್ಯಾಟಿಂಗ್ ಹಾಗೂ ದುಸೇನ್(62) ಅವರ ಅರ್ಧಶತಕದ ನೆರವಿನಿಂದ 4ನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ 50 ಓವರ್‌ಗಳಲ್ಲಿ 416/5 ಬೃಹತ್ ಮೊತ್ತ ಕಲೆಹಾಕಿತು. ಈ ಗುರಿಯನ್ನ ಬೆನ್ನತ್ತಿದ ಆಸ್ಟ್ರೇಲಿಯಾ 34.5 ಓವರ್‌ಗಳಲ್ಲಿ 252 ರನ್‌ಗಳಿ ಆಲೌಟ್ ಆಗುವ ಮೂಲಕ 164 ರನ್‌ಗಳ ಸೋಲು ಕಂಡಿತು. ಆಸೀಸ್ ಪರ ಅಲೆಕ್ಸ್ ಕ್ಯಾರಿ(99) ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಸೌತ್ ಆಫ್ರಿಕಾ 2-2ರ ಸಮಬಲ ಸಾಧಿಸಿದೆ.