ಚಾಮರಾಜನಗರ: ಶವ ಸಂಸ್ಕಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಹೆಜ್ಜೇನು ದಾಳಿ (Bee attack) ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, 10 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಠನೆ ಜಿಲ್ಲೆಯ ಹನೂರು ತಾಲೂಕಿನ ಕೊಂಗರಹಳ್ಳಿಯಲ್ಲಿ ನಡೆದಿದೆ. ಚಿನ್ನಪ್ಪ (60) ಹೆಜ್ಜೇನು ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾರೆ. ಗಾಯಗೊಂಡಿರುವ 10 ಜನರನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಮಹಿಳೆಯ ಶವಸಂಸ್ಕಾರಕ್ಕೆ ನೆಂಟರು ಹಾಗೂ ಗ್ರಾಮಸ್ಥರು ತೆರಳಿದ್ದರು. ಈ ವೇಳೆ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ, ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ ಮರದ ಮೇಲಿದ್ದ ಹೆಜ್ಜೇನು ದಾಳಿ ಮಾಡಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಚಿನ್ನಪ್ಪ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.