ಮಂಗಳೂರು: ವಿಮಾನದಲ್ಲಿ ಬಂದು ಕಳ್ಳತನ ಮಾಡಿ ಮತ್ತೆ ವಿಮಾನದ ಮೂಲಕ ಪರಾರಿಯಾಗುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹೈಟೆಕ್ ಖದೀಮರು, ವಿಮಾನದಲ್ಲಿ ದೊಡ್ಡ ದೊಡ್ಡ ನಗರಕ್ಕೆ ಬಂದು, ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭಾರಣ, ಹಣ ಕದ್ದು ಪರಾರಿಯಾಗುತ್ತಿದ್ದರು. ಈ ಅಂತಾರಾಜ್ಯ ಖದೀಮರನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಈ ಹೈಟೆಕ್ ಕಳ್ಳರು ಮಂಗಳೂರು ರೈಲ್ವೆ ಪೊಲೀಸರ (Mangaluru Railway Police) ಬಲೆಗೆ ಬಿದ್ದಿದ್ದಾರೆ. ಯುಪಿ ಮೂಲದ ಅಭಯರಾಜ್ (26), ಹರಿಶಂಕರ್ ಗಿರಿ(25) ಬಂಧಿತ ಕಳ್ಳರು ಎನ್ನಲಾಗಿದೆ. ಮಂಗಳೂರು-ಸುರತ್ಕಲ್ ಮಾರ್ಗದ ರೈಲಿನಲ್ಲಿ ನಡೆದಿದ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಮೇಲೆ ಈ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರಿ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಇವರ ಹೈಟೆಕ್ ದಂಧೆ ಬಯಲಿಗೆ ಬಂದಿದೆ.
ಸೆಪ್ಟೆಂಬರ್ 28ರಂದು ಮಂಗಳೂರು- ಸುರತ್ಕಲ್ ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದವರಿಂದ ಕಳ್ಳತನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಇಬ್ಬರನ್ನು ಸಂಶಯದಿಂದ ರೈಲಿನಲ್ಲಿ ವಶಕ್ಕೆ ಪಡೆದು ವಿಚಾರಿಸಿದ್ದರು. ಆಗ ಇವರ ಕಳ್ಳಾಟ ಬಯಲಿಗೆ ಬಂದಿದೆ. ಇವರು ರಾತ್ರಿ ವೇಳೆ ಕೊಂಕಣ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಅಲ್ಲದೇ ಕೇರಳ, ಕರ್ನಾಟಕದ ರೈಲಿನಲ್ಲಿ ಪ್ರಯಾಣಿಕರ ಚಿನ್ನ ಕದ್ದು ವಿಮಾನದಲ್ಲಿ ಪರಾರಿಯಾಗುತ್ತಿದ್ದರು. ಈಗ ಈ ಖದೀಮರವನ್ನು ಬಂಧಿಸಲಾಗಿದ್ದು, ಅವರಿಂದ 125 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಬಂಧಿತರು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯವರು ಎನ್ನಲಾಗಿದೆ.