ನವದೆಹಲಿ : ನಾಳೆ ದೇಶಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ದೇಶದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಾಳೆ ಕೆಲ ಭಯೋತ್ಪಾದಕ ಸಂಘಟನೆಗಳು ಹಾಗೂ ಸಮಾಜಘಾತುಕ ಶಕ್ತಿಗಳು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ವಿಭಾಗ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.
ದೆಹಲಿಯ ಕೆಂಪುಕೋಟೆ ಪ್ರದೇಶದಲ್ಲಿ 300 ಕ್ಯಾಮೆರಾಗಳು, 4 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೊರೊನಾ ಹಿನ್ನಲೆ ನಾಳಿನ ಸ್ವಾತಂತ್ರೋತ್ಸವಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದು, ಕವಾಯತು ಪಡೆಗಳು ಮಾಸ್ಕ್ ಧರಿಸಿಯೇ ಪೂರ್ವ ತಾಲೀಮು ನಡೆಸಿವೆ. ಸೇನಾ ಪಡೆಗಳು ನಾಳೆ ಗಾಳಿಯಲ್ಲಿ 21 ಸುತ್ತು ಗುಂಡು ಹಾರಿಸಿ, ಪ್ರಧಾನಿ ನರೇಂದ್ರಮೋದಿ ಅವರಿಗೆ ಗೌರವ ವಂದನೆ ಸಲ್ಲಿಸಲಿವೆ. ಬಳಿಕ ಪ್ರಧಾನಿ ಧ್ವಜಾರೋಹಣ ಮಾಡಲಿದ್ದು, ರಾಷ್ಟ್ರಗೀತೆ ಹಾಡಲಿದ್ದಾರೆ. ಬಳಿಕವಷ್ಟೇ ದೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.