ಎಸ್ ಎಸ್ ಎಲ್ ಸಿ ಪರೀಕ್ಷಗೆ ಕೋರ್ಟ್ ಗ್ರೀನ್ ಸಿಗ್ನಲ್ : ವಿದ್ಯಾರ್ಥಿ ಕೂಗಾಟ
ಬೆಂಗಳೂರು : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ದ್ವಿತೀಯ ಪಿಯುಸಿ, ಸಿಬಿಎಸ್ ಇ ಮಾದರಿಯಲ್ಲಿ ಎಸ್ ಎಸ್ ಎಲ್ ಸಇ ಪರೀಕ್ಷೆ ರದ್ದು ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ.
ಪಿಯು ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಿದಂತೆಯೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನೂ ತೇರ್ಗಡೆ ಮಾಡಬೇಕು ಎಂದು ಕೋರಿ ನಗರದ ಜ್ಞಾನಮಂದಿರ ಟ್ರಸ್ಟ್ ನ ಎಸ್.ವಿ.ಸಿಂಗ್ರೇಗೌಡ ಅವರು ಪಿಐಎಲ್ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಹಾಗೂ ನ್ಯಾ. ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರ ಸಂಗ್ರೇಗೌಡ ಮನವಿಗೆ ಸರ್ಕಾರದಿಂದ ಆಕ್ಷೇಪಣೆ ವ್ಯಕ್ತಪಡಿಸಲಾಯ್ತು. ಅಲ್ಲದೆ ಎಜಿ ಪ್ರಭುಲಿಂಗ ನಾವಡಗಿ ಅವರು, 2 ದಿನಗಳ ಕಾಲ ಮಾತ್ರ ಪರೀಕ್ಷೆ ನಡೆಸುತ್ತೇವೆ. ತಲಾ ಒಂದು ಗಂಟೆಯ ಅವಧಿಯ ಪರೀಕ್ಷೆ ಇರುತ್ತೆ. ವಿದ್ಯಾರ್ಥಿಗಳ ಮುಂಜಾಗೃತೆಗೆ ಎಲ್ಲಾ ಕ್ರಮಕೈಗೊಳ್ಳಲಾಗಿದೆ. ಯಾವ ವ್ಯಕ್ತಿಗಳು ಪರೀಕ್ಷೆಗೆ ಹಾಜರಾಗುತ್ತಾರೋ ಎಲ್ಲರನ್ನೂ ಪಾಸ್ ಮಾಡಲಾಗುವುದು ಅಂತಾ ಹೈಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿದೆ. ಜತೆಗೆ ಪೋಷಕರಿಗೂ ಸಮಸ್ಯೆಯಾಗಲಿದೆ ಎಂದರು. ಅರ್ಜಿದಾರರ ವಾದ ಪರಿಗಣಿಸದ ಪೀಠ, ಕೋವಿಡ್ ಸೋಂಕು ಕಡಿಮೆ ಇರುವುದರಿಂದ ಪರೀಕ್ಷೆ ನಡೆಸುವುದು ಸೂಕ್ತ ಅಂತಾ ಅಭಿಪ್ರಾಯ ಪಟ್ಟಿತ್ತು. ಆ ಮೂಲಕ ಸರ್ಕಾರದ ನಿರ್ಧಾರದಂತೆ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.
ಈ ವೇಳೆ ಆನ್ ಲೈನ್ ಕಲಾಪಕ್ಕೆ ಹಾಜರಾಗಿದ್ದ ವಿದ್ಯಾರ್ಥಿಯೋರ್ವ ನಮಗೆ ಪರೀಕ್ಷೆ ಬೇಡ ಎಂದು ಕೂಗಿದ. ಇದಕ್ಕೆ ಬೇಸರ ವ್ಯಕ್ತಪಡಿಸದ ಪೀಠ, ಕೂಗಾಡುವುದಕ್ಕೆ ಇದು ಮಾರುಕಟ್ಟೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.









