ಹರಿಹರದ ಪಂಚಮಸಾಲಿ ಪೀಠದಲ್ಲಿ ಇಂದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಭೆಯ ವೇಳೆ ಭಾರೀ ಗಲಾಟೆ ನಡೆದಿದೆ. ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ ಲೆಕ್ಕ ಮಂಡಿಸುವ ವೇಳೆ, ಕೆಲವರು ಲೆಕ್ಕಾಚಾರಗಳ ಬಗ್ಗೆ ಪ್ರಶ್ನೆ ಎತ್ತಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಶುರುವಾಯಿತು.
ಇಷ್ಟು ದಿನ ನೀವು ಎಲ್ಲಿದ್ದಿರಿ? ಎಂದು ಟ್ರಸ್ಟ್ ಬೆಂಬಲಿಗರು ಪ್ರಶ್ನಿಸಿದ ಮಾತು ಸ್ವಾಮೀಜಿ ಬೆಂಬಲಿಗರನ್ನು ಕೆರಳಿಸಿತು. ಇದರಿಂದ ಪರಿಸ್ಥಿತಿ ಏಕಾಏಕಿ ಉದ್ವಿಗ್ನಗೊಂಡು, ವಿಜಯನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಶಿವನಗೌಡ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ತೀವ್ರಗೊಳ್ಳುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕೆಲ ಸಮಯ ಗೊಂದಲದ ವಾತಾವರಣ ಮುಂದುವರಿದರೂ, ಬಳಿಕ ಸಭೆ ಮುಂದುವರಿಯಿತು.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಬಿ.ಸಿ ಉಮಾಪತಿ ಅವರು 2008ರಿಂದ 2026ರವರೆಗಿನ ಸಂಪೂರ್ಣ ಲೆಕ್ಕಾಚಾರವನ್ನು ಮಂಡಿಸಿದ್ದಾರೆ. ಈ ಘಟನೆ ಪೀಠದ ಒಳಾಂಗಣ ಕಲಹವನ್ನು ಬಹಿರಂಗಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.







