ಶ್ರೀಶೈಲ್ ದಲ್ಲಿ ಕನ್ನಡಿಗನಿಗೆ ಚಾಕು ಇರಿತ | ಆಸ್ಪತ್ರೆಗೆ ದಾಖಲು
ಶ್ರೀಶೈಲ : ನೀರಿನ ವಿಚಾರಕ್ಕೆ ಶ್ರೀಲೈಲದಲ್ಲಿ ಸ್ಥಳೀಯರು ಮತ್ತು ಕನ್ನಡಿಗರ ನಡುವೆ ಗಲಾಟೆ ನಡೆದಿದ್ದು, ಕನ್ನಡಿಗನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ.
ಬಾಗಲಕೋಟೆಯ ಶ್ರೀಶೈಲ್ ವಾರಿಮಠ (28) ಚಾಕು ಇರಿತಕ್ಕೆ ಒಳಗಾದ ಯುವಕ. ಗಾಯಗೊಂಡ ಶ್ರೀಶೈಲರು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಮನೆಯಲ್ಲಿ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ತಾಯಿ ಭಾರತಿ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಶ್ರೀಶೈಲ್ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ್ ಶನಿವಾರ ಗ್ರಾಮದಿಂದ ಶ್ರೀಶೈಲಕ್ಕೆ ತೆರಳಿದ್ದರು. ರೇಲ್ವೆ ಮೂಲಕ ಹೋಗಿದ್ದ ಅವರು ನಂತರ ಕುಟುಂಬವನ್ನು ಸಂಪರ್ಕಿಸಿದ್ದರು. ‘‘ಪೂಜೆ ,ಅಭಿಷೇಕ ಮಾಡಿಸಿದ್ದೇನೆ. ಇಂದು ಗ್ರಾಮಕ್ಕೆ ಮರಳುವುದಾಗಿ ಅವರು ಹೇಳಿದ್ದರು. ಕಳೆದ ಹದಿನೈದು ವರ್ಷಗಳಿಂದ ಶ್ರೀಶೈಲಕ್ಕೆ ಅವರು ಯಾತ್ರೆ ಕೈಗೊಳ್ಳುತ್ತಿದ್ದರು.
ಶ್ರೀಶೈಲ್ ಆರೋಗ್ಯದ ಬಗ್ಗೆ ಗೊಂದಲ ಮೂಡಿದ್ದು, ವದಂತಿಗಳು ಹರಿದಾಡಿವೆ. ಈ ಬಗ್ಗೆ ಕರ್ನೂಲ್ ಎಸ್ಪಿ ಮಾಹಿತಿ ನೀಡಿ ಶ್ರೀಶೈಲ್ ಬದುಕಿರುವುದಾಗಿ ತಿಳಿಸಿದ್ದಾರೆ. ಶ್ರೀಶೈಲ್ ಸಹೋದರ ಶಿವು ಸದ್ಯ ಆಸ್ಪತ್ರೆಗೆ ತೆರಳಿದ್ದಾರೆ.ಘಟನೆ ಬಗ್ಗೆ ಬೀಳಗಿ ಠಾಣೆ ಪೊಲೀಸರು ಹಾಗೂ ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಲ್ಲದೇ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿ, ಶ್ರೀಶೈಲ್ ವಾರಿಮಠ ಕೊಲೆ ಎಂಬುದು ಸದ್ಯಕ್ಕೆ ವದಂತಿ. ಯಾವುದೇ ಸಾವು ಆಗಿಲ್ಲ ಎಂದು ಕರ್ನೂಲ್ ಎಸ್ ಪಿ ಮಾಹಿತಿ ನೀಡಿದ್ದಾರೆ. ವದಂತಿ, ತಪ್ಪು ಸಂದೇಶ ಹೋಗಬಾರದು ಎಂದು ನುಡಿದಿದ್ದಾರೆ.








