ಹಿಜಾಬ್ ತುರ್ತು ವಿಚಾರಣೆ ನಡೆಸುವುದಿಲ್ಲ : ಸುಪ್ರೀಂ
ನವದೆಹಲಿ: ಸುಪ್ರಿಂ ಕೋರ್ಟ್ ಹಿಜಾಬ್ ವಿಷಯಕ್ಕೆ ಸಂಭಂದಿಸಿದಂತೆ ಎರಡನೇ ಬಾರಿಯೂ ತುರ್ತು ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದೆ.
ತರಗತಿಗಳಲ್ಲಿ ಹಿಜಾಬ್ ನಿಷೇಧ ವಿಚಾರಕ್ಕೆ ಸಂಬಂಧಿಸಂತೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಭಂದ ಇಂದು ಬೆಳಗ್ಗೆ 10:30ಕ್ಕೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿದ್ಯಾರ್ಥಿನಿ ಆಯಿಷಾ ಪರ ವಕೀಲ ದೇವದತ್ ಕಾಮತ್ ತುರ್ತು ವಿಚಾರಣೆ ನಡಸಬೇಕು ಎಂದು ಮುಖ್ಯ ನ್ಯಾಯಾಧೀಶ ರಮಣ ಪೀಠದಲ್ಲಿ ಮನವಿ ಮಾಡಿದರು.
ಇದೇ 28 ರಿಂದ ಪರೀಕ್ಷೆ ಆರಂಭವಾಗಲಿದೆ. ಶಾಲೆಯಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆ 1 ವರ್ಷ ಹಾಳಾಗುತ್ತದೆ. ಹಾಗಾಗಿ ಶೀಘ್ರ ವಿಚಾರಣೆ ನಡೆಸಬೇಕು ಎಂದು ಅವರು ವಾದಿಸಿದರು. ಇದಕ್ಕೆ ಅಸಮಧಾನಗೊಂಡ ಸಿಜೆಐ, ಪ್ರಕರಣಕ್ಕೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಸಮಸ್ಯೆಯನ್ನು ಸೂಕ್ಷ್ಮಗೊಳಿಸಬೇಡಿ ಎಂದು ಹೇಳಿ ಮನವಿಯನ್ನು ತಿರಸ್ಕರಿಸಿ ಮತ್ತೊಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡರು.
ಈ ಹಿಂದೆಯೇ ತುರ್ತು ವಿಚಾರಣೆ ಕೈಗೊಳ್ಳುವಂತೆಯೂ ಮನವಿ ಮಾಡಿದಾಗ ಹೋಳಿ ಹಬ್ಬದ ರಜೆಯ ಬಳಿಕ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು.
ಶಾಲೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಪಾಲಿಸಬೇಕೆಂಬ ಕರ್ನಾಟಕ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಷ್ಟೇ ಅಲ್ಲದೇ ಹಿಜಬ್ ಮುಸ್ಲಿಂ ಧರ್ಮದ ಕಡ್ಡಾಯ ಆಚರಣೆ ಭಾಗವಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿದೆ.