ಪುತ್ತೂರ ಮುತ್ತು ಶ್ರೀ ಮಹಾಲಿಂಗೇಶ್ವರ..
ಹತ್ತೂರ ಭಕ್ತರ ಪಾಲಿಸೊ ಶಂಬೋ ಶಂಕರ..
ಪುತ್ತೂರು ಸೀಮೆಯ ಒಡೆಯ, ಕಾರಣಿಕ ದೈವ, ಇತಿಹಾಸ ಪ್ರಸಿದ್ಧ ಮಹತೋಬರ್ ಶ್ರೀ ಮಹಾಲಿಂಗೇಶ್ವರನಿಗೆ ಈಗ ಜಾತ್ರಾ ಮಹೋತ್ಸವ. ಈ ಬಾರಿ ಕೊರೊನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಭಕ್ತರಿಗೆ ಮಹಾಲಿಂಗೇಶ್ವರನ ಸನ್ನಿಧಾನಕ್ಕೆ ಪ್ರವೇಶವಿಲ್ಲ, ರಥೋತ್ಸವದ ಸಂಭ್ರಮವಿಲ್ಲ. ಆದರೆ ಪ್ರತಿ ಮನವೂ ತಮ್ಮ ಆರಾಧ್ಯ ದೈವವನ್ನು ಸ್ಮರಿಸಿ ಕೊಂಡು, ಜಾತ್ರೆಯ ಸೊಬಗನ್ನು ನೆನಪಿಸಿಕೊಂಡು, ಜಾತ್ರೆಯ ಹತ್ತು ದಿನಗಳ ವೃತವನ್ನು ಪಾಲಿಸುತ್ತಾ ಮಹಾಲಿಂಗೇಶ್ವರನ ನಾಮವನ್ನು ಸ್ತುತಿಸುತ್ತಿದೆ. ಭಕ್ತರ ಭಕ್ತಿಯ ಉತ್ಸವದ ಈ ಸಂದರ್ಭದಲ್ಲಿ ಪುತ್ತೂರು ಮಹಾಲಿಂಗೇಶ್ವರನ ಜಾತ್ರೆಯ ಬಗ್ಗೆ ಒಂದು ಮೆಲುಕು.
ಹತ್ತೂರು ಕೊಟ್ಟರೂ ಪುತ್ತೂರು ಕೊಡೆ ಎನ್ನುವುದು ಇಲ್ಲಿ ಚಾಲ್ತಿಯಲ್ಲಿರುವ ಮಾತು. ಇದು ಪುತ್ತೂರಿನ ಬಗ್ಗೆ ಇಲ್ಲಿನ ಜನರಿಗೆ ಇರುವ ಅಭಿಮಾನವನ್ನು ತೋರಿಸುತ್ತದೆ. ಪುತ್ತೂರು ಸರ್ವ ಧರ್ಮ ಸಮನ್ವಯದ ಬೀಡು . ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿನ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ಹೊರರಾಜ್ಯಗಳಿಂದ ಕೂಡ ಶಿಕ್ಷಣಕ್ಕಾಗಿ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿನ ವಿಶೇಷ ಇತಿಹಾಸ ಪ್ರಸಿದ್ಧ ಮಹತೋಬರ್ ಶ್ರೀ ಮಹಾಲಿಂಗೇಶ್ವರ.. ಪುತ್ತೂರಿನ ಜನ ಜಗತ್ತಿನಲ್ಲಿ ಎಲ್ಲೇ ಇರಲಿ, ಯಾರೇ ಆಗಿರಲಿ, ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲುತ್ತದೆ ಮಾತ್ರವಲ್ಲ ಈ ಮಹಾಲಿಂಗೇಶ್ವರನನ್ನು ನೆನೆದೇ ಅವರು ಯಾವುದೇ ಕಾರ್ಯ ಆರಂಭಿಸುವುದು.
ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರು ಸ್ಮಶಾನ ಇರುವ ಮತ್ತೊಂದು ದೇವಾಲಯ ಇರುವುದು ಪುತ್ತೂರಲ್ಲಿ ಮಾತ್ರ. ಉಳಿದ ದೇವಾಲಯಗಳಂತೆ ವರ್ಷಕ್ಕೆ ಒಂದು ಬಾರಿ ಪುತ್ತೂರಿನ ಆರಾಧ್ಯ ಶ್ರೀ ಮಹಾಲಿಂಗೇಶ್ವರನಿಗೂ ಜಾತ್ರಾ ಮಹೋತ್ಸವ ನಡೆಯುತ್ತದೆ. ಏಪ್ರಿಲ್ 1 ರಂದು ಗೊನೆ ಕಡಿದು ಏಪ್ರಿಲ್ 10ರಂದು ಸಾಂಪ್ರದಾಯಿಕ ಧ್ವಜಾರೋಹಣ ನಡೆಯುವುದರೊಂದಿಗೆ ಪ್ರಾರಂಭವಾಗುವ ಈ ಜಾತ್ರೆಯು 9 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ದಿನಗಳಲ್ಲಿ ಮಹಾಲಿಂಗೇಶ್ವರ ತನ್ನ ಭಕ್ತರ ಮನೆ ಬಾಗಿಲಿಗೆ ಬಂದು ದರ್ಶನ ಕೊಡುವುದು ಇಲ್ಲಿನ ವಿಶೇಷ. ಏಪ್ರಿಲ್ 16ರಂದು ದೂರದ ಬಲ್ನಾಡ್ ದೈವಸ್ಥಾನದಿಂದ ದಂಡನಾಯಕ ಮಲರಾಯರ ಜೊತೆ ಉಳ್ಳಾಲ್ತಿ ದೈವ ತನ್ನ ಭಂಡಾರದೊಂದಿಗೆ ದೇವರ ರಥೋತ್ಸವ ನೋಡಲು ಆಗಮಿಸುವುದು ಇಲ್ಲಿನ ಮತ್ತೊಂದು ವಿಶೇಷ. ದೇವಾಲಯದ ಹೊರಾಂಗಣಕ್ಕೆ ದೈವಗಳ ಭಂಡಾರ ಆಗಮಿಸಿದಾಗ ಸ್ವತಃ ದೇವರೇ ದೈವಗಳನ್ನು ಎದುರುಗೊಂಡು ಬರಮಾಡಿಕೊಳ್ಳುವುದನ್ನು ನೋಡಲು ಇಲ್ಲಿ ಮಾತ್ರ ಸಾಧ್ಯ. ಆ ಭಾವುಕ ಕ್ಷಣವನ್ನು ಕಣ್ಣು ತುಂಬಿಕೊಳ್ಳಲು ಭಕ್ತ ಸಮೂಹವೇ ಸೇರುತ್ತದೆ . ನಂತರ ಸಣ್ಣ ರಥೋತ್ಸವ, ಕೆರೆ
ಆಯನ ನಡೆದು ಏಪ್ರಿಲ್ 17ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆಯಾಗಿ ರಾತ್ರಿ ಪುತ್ತೂರು ಬೆಡಿ ಪ್ರದರ್ಶನ. ನಂತರ ದೇವರ ಬ್ರಹ್ಮ ರಥೋತ್ಸವ ನಡೆಯುತ್ತದೆ. ದೇವರು ಬ್ರಹ್ಮರಥದಿಂದ ಇಳಿದು ಬಂದ ನಂತರ ದೈವಗಳೊಂದಿಗೆ ಕಟ್ಟೆ ಸವಾರಿ ನಡೆದು ದೈವಗಳು ಬಲ್ನಾಡಿನೆಡೆ ಹೆಜ್ಜೆ ಹಾಕಿದರೆ, ದೇವರು ಪೇಟೆ ಸವಾರಿ ಮುಂದುವರಿಸುತ್ತಾರೆ. ಮರುದಿನ ಅಂದರೆ ಏಪ್ರಿಲ್ 18ರಂದು ಸಂಜೆ ಅಂಗಳತ್ತಾಯ ಎಂಬ ದೈವವನ್ನು ಕರೆದು, ದೇವಾಲಯದ ರಕ್ಷಣೆ ವಹಿಸಿ ದೇವರು ಅವಭೃತ ಸ್ನಾನಕ್ಕೆ ವೀರಮಂಗಲದೆಡೆ ಸಾಗುತ್ತಾರೆ. ಮರುದಿನ ಬೆಳಿಗ್ಗೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ದೇವರು ಆಗಮಿಸುವುದರೊಂದಿಗೆ ಧ್ವಜ ಆರೋಹಣ ನಡೆದು ಜಾತ್ರೆಗೆ ತೆರೆ ಬೀಳುತ್ತದೆ.
ಈ ಬಾರಿ ಭಕ್ತರ ಮನೆಮನದಲ್ಲಿ ನೆಲೆಗೊಂಡಿರುವ ಆರಾಧ್ಯ ದೈವ ಅವರ ಹೃದಯ ಮಂದಿರದಲ್ಲಿ ಪೂಜೆಗೊಳಗಾಗುತ್ತಿದ್ದಾನೆ. ಬಂದಿರುವ ಕಷ್ಟವನ್ನು ಪರಿಹರಿಸಿ ಸರ್ವರನ್ನೂ ಶ್ರೀ ಮಹಾಲಿಂಗೇಶ್ವರ ಸಲಹಲಿ ಎಂದು ಈ ಸಂದರ್ಭದಲ್ಲಿ ನಾವೆಲ್ಲರೂ ಪ್ರಾರ್ಥಿಸೋಣ…








