ನವೀನ್ ಕುಮಾರ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದು, ಇಂದು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಛಲದ ಅರಸ ಯಶ್. ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಈಗ ಕೇವಲ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲ, ಅವರು ಪ್ಯಾನ್ ವರ್ಲ್ಡ್ ಸ್ಟಾರ್. ಕೆಜಿಎಫ್ ಎಂಬ ಚಿನ್ನದ ಗಣಿಯ ಮೂಲಕ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದ ಯಶ್, ಈಗ ತಮ್ಮ ಮುಂದಿನ ಸಿನಿಮಾ ಟಾಕ್ಸಿಕ್ ಮೂಲಕ ಹಾಲಿವುಡ್ ಅಂಗಳದಲ್ಲೂ ಸಂಚಲನ ಮೂಡಿಸಿದ್ದಾರೆ.
ನವೀನ್ ಕುಮಾರ್ ಟು ಗ್ಲೋಬಲ್ ಸ್ಟಾರ್
ಸಾಮಾನ್ಯ ನವೀನ್ ಕುಮಾರ್ ಆಗಿ ತಮ್ಮ ಸಿನಿ ಪಯಣ ಆರಂಭಿಸಿದ ಯಶ್, ಹಂತ ಹಂತವಾಗಿ ಬೆಳೆದು ರಾಕಿಂಗ್ ಸ್ಟಾರ್ ಪಟ್ಟಕ್ಕೇರಿದರು. ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ 2 ಸಿನಿಮಾಗಳು ಯಶ್ ಕೆರಿಯರ್ ಅನ್ನೇ ಬದಲಿಸಿಬಿಟ್ಟವು. ಕೇವಲ ಕನ್ನಡ ಮಾತ್ರವಲ್ಲದೇ, ಇಡೀ ಭಾರತವೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಕೀರ್ತಿ ರಾಕಿ ಭಾಯ್ ಗೆ ಸಲ್ಲುತ್ತದೆ. ಯಶ್ ಅವರ ಗಡ್ಡ, ಹೇರ್ ಸ್ಟೈಲ್, ಮ್ಯಾನರಿಸಂ ಮತ್ತು ಖಡಕ್ ಡೈಲಾಗ್ ಗಳಿಗೆ ವಿದೇಶಿ ಪ್ರೇಕ್ಷಕರು ಕೂಡ ಮಾರುಹೋಗಿದ್ದರು. ಇದೀಗ ಆ ಕ್ರೇಜ್ ಮತ್ತೊಂದು ಹಂತಕ್ಕೆ ತಲುಪಿದೆ.
ವಿಶ್ವದ ಗಮನ ಸೆಳೆದ ಟಾಕ್ಸಿಕ್ ಅವತಾರ
ಯಶ್ ಅವರ 19ನೇ ಸಿನಿಮಾ ಟಾಕ್ಸಿಕ್ ಅನೌನ್ಸ್ ಆದಾಗಿನಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾದ ಶೀರ್ಷಿಕೆ ಮತ್ತು ಟೀಸರ್ ನಲ್ಲಿನ ಯಶ್ ಲುಕ್ ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಈ ಟೀಸರ್ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ, ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಗಡಿ ದಾಟಿ ನೇರವಾಗಿ ಹಾಲಿವುಡ್ ತಂತ್ರಜ್ಞರ ಕಣ್ಣು ಕುಕ್ಕಿದೆ. ಹೌದು, ಯಶ್ ಅವರ ಟಾಕ್ಸಿಕ್ ಖದರ್ ಕಂಡು ಹಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಮತ್ತು ವಿಎಫ್ಎಕ್ಸ್ ದಿಗ್ಗಜ ನಮಿತ್ ಮಲ್ಹೋತ್ರಾ ಫಿದಾ ಆಗಿದ್ದಾರೆ.
ಹಾಲಿವುಡ್ ನಿರ್ದೇಶಕನಿಂದ ರಾಕಿ ಭಾಯ್ ಗುಣಗಾನ
ವಿಶ್ವದ ಅತ್ಯಂತ ದೊಡ್ಡ ಸಿನಿಮಾಗಳಿಗೆ ಕೆಲಸ ಮಾಡುವ, ಹಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿರುವ ನಮಿತ್ ಮಲ್ಹೋತ್ರಾ ಅವರು ಯಶ್ ಬಗ್ಗೆ ಆಡಿರುವ ಮಾತುಗಳು ಈಗ ವೈರಲ್ ಆಗಿವೆ. ಯಶ್ ಹುಟ್ಟುಹಬ್ಬದಂದು ಶುಭಕೋರಿರುವ ಅವರು, ಯಶ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.
ನನ್ನ ಸ್ನೇಹಿತ ರಾಕಿಂಗ್ ಸ್ಟಾರ್ ಯಶ್ ಗೆ 40ನೇ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿರುವ ನಮಿತ್, ಟಾಕ್ಸಿಕ್ ಶೀರ್ಷಿಕೆಯನ್ನು ಇಟ್ಟುಕೊಂಡೇ ಯಶ್ ಗುಣಗಾನ ಮಾಡಿದ್ದಾರೆ. ನಿಮ್ಮ ಶಕ್ತಿ ಮತ್ತು ಮನೋಭಾವವು ರಿಯಲ್ ಲೈಫ್ ನಲ್ಲಿ ಟಾಕ್ಸಿಕ್ ಅಲ್ಲ. ನೀವು ಆಟವನ್ನು ಬದಲಾಯಿಸುವ ರೀತಿ (Game Changer) ನನಗೆ ತುಂಬಾ ಇಷ್ಟವಾಯಿತು. ಅತ್ಯುತ್ತಮ ಪ್ರತಿಭೆಯಾಗಿ ಕನ್ನಡದಿಂದ ಭಾರತಕ್ಕೆ ಮತ್ತು ಈಗ ಜಗತ್ತಿಗೆ ಪರಿಚಯವಾಗುತ್ತಿದ್ದೀರಿ. ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸುವ ನಿಮ್ಮ ಲೀಗ್ನಲ್ಲಿ ನಾವೆಲ್ಲರೂ ನಿಮ್ಮೊಂದಿಗೆ ಸೇರುತ್ತಿದ್ದೇವೆ. ನಿಮ್ಮ ದಿನವನ್ನು ಆನಂದಿಸಿ ಮತ್ತು 2026ನ್ನು ಆಚರಿಸಿ ಎಂದು ಹಾಲಿವುಡ್ ನಿರ್ದೇಶಕ ನಮಿತ್ ಮಲ್ಹೋತ್ರಾ ಯಶ್ ಬೆನ್ನತಟ್ಟಿದ್ದಾರೆ.
ಒಟ್ಟಿನಲ್ಲಿ ಕನ್ನಡದ ಹೆಮ್ಮೆಯ ನಟನೊಬ್ಬನ ಟೀಸರ್ ಮತ್ತು ಪೋಸ್ಟರ್ ನೋಡಿ ಹಾಲಿವುಡ್ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಸಣ್ಣ ವಿಷಯವೇನಲ್ಲ. ಟಾಕ್ಸಿಕ್ ಸಿನಿಮಾ ಮೂಲಕ ಯಶ್ ವಿಶ್ವದಾದ್ಯಂತ ಕನ್ನಡದ ಬಾವುಟ ಹಾರಿಸುವುದು ಪಕ್ಕಾ ಎಂದು ಅಭಿಮಾನಿಗಳು ಕಾಲರ್ ಎತ್ತಿ ಹೇಳುತ್ತಿದ್ದಾರೆ.








