ಅಯೋಧ್ಯೆ : ಅಯೋಧ್ಯೆಯಲ್ಲಿ ಶ್ರೀರಾಮಮಂದಿರ (Sri Ram Mandir) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಲಿದೆ. ಈ ಮಧ್ಯೆ ಭಕ್ತರು ರಾಮಲಲ್ಲಾನಿಗೆ ವಿಧ ವಿಧ ವಸ್ತುಗಳನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ನೇಪಾಳ ಕೂಡ ಸಾಕ್ಷಿಯಾಗುತ್ತಿದೆ. ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ.
ಜನವರಿ 22 ರಂದು ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲು ಮುಂದಾಗಿದೆ.
ಯೋಧ್ಯೆಗೂ, ನೆರೆಯ ರಾಷ್ಟ್ರ ನೇಪಾಳಕ್ಕೂ ಸಂಬಂಧವಿದೆ. ನೇಪಾಳದಲ್ಲಿ ಜನಿಸಿದ ಸೀತಾಮಾತೆಯನ್ನು ಭಗವಾನ್ ಶ್ರೀರಾಮನು ಮದುವೆಯಾಗಿದ್ದರು. ಅಂದಿನಿಂದ ಭಾರತ-ನೇಪಾಳದ ಸಂಬಂಧವಿದೆ, ಇದನ್ನು ರೋಟಿ-ಭೇಟಿ ಸಂಬಂಧ ಎಂದು ಕರೆಯುತ್ತಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿ ಉದ್ಘಾಟನೆಯಾಗುತ್ತಿದ್ದು ಬಾಲರಾಮನ (Ram Lalla) ಅಭಿಷೇಕಕ್ಕೆ ಸೀತಾಮಾತೆಯ ತವರು ನೇಪಾಳದಿಂದ ನೀರನ್ನು ತರಲಾಗುತ್ತಿದೆ ಎನ್ನಲಾಗುತ್ತಿದೆ. ಜ. 5ರಂದು ಭಗವಾನ್ ರಾಮನ ಅತ್ತೆ ಮನೆಯಾಗಿರುವ ನೇಪಾಳದ ಜನಕ್‌ಪುರದಿಂದ ಬಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ಅಯೋಧ್ಯೆಗೆ ಬರುತ್ತಿವೆ. ಉಡುಗೊರೆಗಳಿಂದ ಅಲಂಕರಿಸಲ್ಪಟ್ಟ 1,100 ಪ್ಲೇಟ್ ಗಳು, ಆಭರಣಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಸಹ ಆಗಮಿಸಲಿವೆ. 51 ಬಗೆಯ ಸಿಹಿತಿಂಡಿಗಳು ಇರಲಿವೆ. ಜೊತೆಗೆ ಮೊಸರು, ಬೆಣ್ಣೆ ಮತ್ತು ಬೆಳ್ಳಿಯ ಪಾತ್ರೆಗಳು ಕೂಡ ನೇಪಾಳದಿಂದಲೇ ಆಗಮಿಸಲಿವೆ ಎನ್ನಲಾಗುತ್ತಿದೆ.