ಬೆಂಗಳೂರು: ಕೇಂದ್ರ ಸರ್ಕಾರದ ನೌಕರರೊಬ್ಬರಿಗೆ ಖಾಸಗಿ ವಿಡಿಯೋ ಇದೆ ಎಂದು ಹೆದರಿಸಿ ಬರೋಬ್ಬರಿ 2.5 ಕೋಟಿ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಹನಿಟ್ರ್ಯಾಪ್ (Honey Trap) ಮಾಡಿದ ಆರೋಪಿಗಳನ್ನು ಸಿಸಿಬಿ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ತಬ್ಸಂ ಬೇಗಂ, ಅಜೀಮ್ ಉದ್ದಿನ್, ಆನಂದ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ವಂಚನೆಗೊಳಗಾದ ವ್ಯಕ್ತಿಯನ್ನು ಆರ್‌ಟಿ ನಗರದ ಜಿಮ್ ಒಂದರಲ್ಲಿ ಆರೋಪಿ ತಬ್ಸಂ ಬೇಗಂ ಪರಿಚಯ ಮಾಡಿಕೊಂಡಿದ್ದಳು. ಆನಂತರ ಸಲುಗೆ ಬೆಳೆಸಿಕೊಂಡು, ಮಗು ದತ್ತು ಪಡೆದಿದ್ದೇನೆ ಎಂದು ಸಹಾಯ ಪಡೆದಿದ್ದಳು.
ಆನಂತರ ವಾಟ್ಸಾಪ್ ಮೂಲಕ ಖಾಸಗಿ ಫೋಟೊ ಕಳಿಸಿ ಅವರಿಗೆ ಗ್ಯಾಂಗ್ ಬೆದರಿಸಿತ್ತು. ಪೊಲೀಸ್ ಹಾಗೂ ವಕೀಲ ಎಂದು ಹೇಳಿ ಹೆದರಿಸಿ, 2021ರಿಂದ ನಿರಂತರವಾಗಿ ಹಂತ ಹಂತವಾಗಿ 2.5 ಕೋಟಿ ರೂ. ಹಣ ವಸೂಲಿ ಮಾಡಲಾಗಿದೆ ಎನ್ನಲಾಗಿದೆ. ಸದ್ಯ 3 ವರ್ಷಗಳ ನಂತರ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.






